ADVERTISEMENT

ಬೀಳಗಿ: ರಿಕ್ಷಾಗಳ ತಂಗುದಾಣವಾದ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 4:44 IST
Last Updated 15 ಆಗಸ್ಟ್ 2023, 4:44 IST
ಬೀಳಗಿ ಕ್ರಾಸ್‌ ಬಸ್ ತಂಗುದಾಣದ ಎದುರು ನಿಂತಿರುವ ಆಟೊಗಳು
ಬೀಳಗಿ ಕ್ರಾಸ್‌ ಬಸ್ ತಂಗುದಾಣದ ಎದುರು ನಿಂತಿರುವ ಆಟೊಗಳು   

ಕಾಶಿನಾಥ ಸೋಮನಕಟ್ಟಿ

ಬೀಳಗಿ: ಬೀಳಗಿ ಕ್ರಾಸ್ 1ರಲ್ಲಿ 15 ರಿಂದ 20 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬಸ್ ನಿಲ್ದಾಣದಲ್ಲಿ ಬಸ್ಸುಗಳೇ ಬರುವುದಿಲ್ಲ. ಅದರ ಬದಲು ಆಟೊರಿಕ್ಷಾಗಳ ನಿಲ್ದಾಣವಾಗಿ ಬದಲಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳುಗಡೆಯಾದ ಹೆಗ್ಗೂರ, ನಿಂಗಾಪುರ, ಗ್ವಾಡ್ಯಾಳ, ಮುತ್ತಲದಿನ್ನಿ, ಕೊಪ್ಪ ಹಾಗೂ ಇನ್ನೂ ಅನೇಕ ಪುನರ್ವಸತಿ ಕೇಂದ್ರಗಳಲ್ಲಿಯ ಸಂತ್ರಸ್ತರಿಗೆ ಉಪಯೋಗವಾಗುವಂತೆ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಇಲಾಖೆ ವತಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣಕ್ಕೆ ಯಾವುದೇ ಬಸ್‌ಗಳು ಬರುತ್ತಿಲ್ಲ.

ADVERTISEMENT

ಆ ಪುನರ್ವಸತಿ ಕೇಂದ್ರದಲ್ಲಿಯ ಸಾರ್ವಜನಿಕರು ವಿಜಯಪುರ ಮಾರ್ಗವಾಗಿ ಸಂಚಾರ ಮಾಡಲು ಸಾರಿಗೆ ಬಸ್ಸಿನ ಸೌಲಭ್ಯಕ್ಕಾಗಿ ಬೀಳಗಿ ಕ್ರಾಸ್‌ನಲ್ಲಿರುವ ಕನಕ ವೃತ್ತದ ಎದುರು ಬಿಸಿಲು, ಮಳೆ, ಚಳಿ ಎನ್ನದೇ ನಿಂತು ಕಾಯಬೇಕು. ಹುಬ್ಬಳ್ಳಿ ಮತ್ತು ಬಾಗಲಕೋಟೆ ಮಾರ್ಗವಾಗಿ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ 218 ಕ್ಕೆ ಹೊಂದಿಕೊಂಡಿರುವ ಮನ್ನಿಕೆರಿ ರಸ್ತೆ ಬದಿಯಲ್ಲಿ ನಿಲ್ಲಬೇಕು. ವೃದ್ಧರು, ಮಹಿಳೆಯರು, ಮಕ್ಕಳು ಬಿರುಬಿಸಿಲಿನಲ್ಲಿ, ಮಳೆಯಲ್ಲಿ ನಿಂತು ತೊಂದರೆ ಅನುಭವಿಸುತ್ತಿದ್ದಾರೆ.

ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿರುವ ಬಸ್ ತಂಗುದಾಣ ಮಾತ್ರ ವ್ಯರ್ಥವಾಗುತ್ತಿದೆ. ಅನೈತಿಕ ಚಟುವಟಿಕೆ, ಮದ್ಯ ವ್ಯಸನಿಗಳ ತಾಣವಾಗಿದೆ. ಸಂಬಂಧಪಟ್ಟ ಇಲಾಖೆಯವರು ಇಲ್ಲಿ ಸ್ವಚ್ಛತೆ ಮಾಡಿಸಿ ಬಸ್ಸುಗಳು ಬಂದು ನಿಲ್ಲುವಂತೆ ಮಾಡಿದರೆ ಉಪಯುಕ್ತ ಎಂದು ಸಂತ್ರಸ್ತರಾದ ವಿರೂಪಾಕ್ಷ ಹಿರೇಮಠ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಏಕೆ ಬಳಸುತ್ತಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಶ್ನಿಸಿದರೆ, ‘ಆ ಸ್ಥಳ ಬಸ್ ತಂಗುದಾಣ ಮಾಡಲು ಯೋಗ್ಯವಾಗಿಲ್ಲ. ಅದು ಅವೈಜ್ಞಾನಿಕ ಸ್ಥಳವಾಗಿದೆ ಎಂದು ಉತ್ತರಿಸುತ್ತಾರೆ. ಹಾಗಾದರೆ ಇದರ ನಿರ್ಮಾಣದ ಅವಶ್ಯಕತೆಯಾದರೂ ಏನಿತ್ತು ಎಂಬುದು ಸದ್ಯದ ಪ್ರಶ್ನೆಯಾಗಿದೆ. ಸರ್ಕಾರದ ಹಣ ಈ ರೀತಿ ದುರುಪಯೋಗ ಆಗುವುದನ್ನು ಕಂಡೂ ಕಾಣದ ಹಾಗೆ ಕುಳಿತುಕೊಂಡಿರುವ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಜಾಗವನ್ನು ಸ್ವಚ್ಛಗೊಳಿಸಿ, ಅದರ ಗೊಡೆಗಳಿಗೆ ಬಣ್ಣ ಬಳಿದು ಸುವ್ಯವಸ್ಥಿತಗೊಳಿಸಬೇಕು ಎಂದು ಇಲ್ಲಿ ಸಂಚರಿಸುವ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಗ್ರಾ.ಪಂ. ನಿರ್ವಹಣೆಗೆ ಸೂಚನೆ

ಬೀಳಗಿ ಕ್ರಾಸ್-1ರಲ್ಲಿ ಇರುವ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ನಿಲ್ಲಿಸಲು ತಿರುವು ತೆಗೆದುಕೊಳ್ಳಲು ಹಿಂದಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಿವೆ. ಒಂದು ಬಸ್ ನಿಲ್ದಾಣ ಮಾಡಲು ಅಂದಾಜು ಒಂದು ಎಕರೆಯಷ್ಟು ಪ್ರದೇಶ ಬೇಕು. ಆ ನಿಲ್ದಾಣವನ್ನು ವೀಕ್ಷಿಸಲಾಗಿದೆ. ಅದು ಬಸ್ ಶೆಲ್ಟರ್‌ ಆಗಲು ಮಾತ್ರ ಅರ್ಹತೆ ಹೊಂದಿದೆ. ಹೀಗಾಗಿ ಅದನ್ನು ಅಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತೆಗೆದುಕೊಂಡು ನಿರ್ವಹಣೆ ಮಾಡಲು ತಿಳಿಸಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಬೀಳಗಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್. ಲಮಾಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.