ADVERTISEMENT

ಬಾಗಲಕೋಟೆ: ಮಕ್ಕಳಿಗಿಂತ ಮೊದಲೇ ಶಾಲೆ ಸೇರಿದ ಪಠ್ಯಪುಸ್ತಕ

ಶಾಲೆ ಆರಂಭಕ್ಕೆ ಸಕಲ ಸಿದ್ಧತೆ; ಮಕ್ಕಳೂ ರೆಡಿ

ಬಸವರಾಜ ಹವಾಲ್ದಾರ
Published 30 ಮೇ 2025, 7:03 IST
Last Updated 30 ಮೇ 2025, 7:03 IST
ಬಾಗಲಕೋಟೆಗೆ ಸರಬರಾಜಾಗಿರುವ ಪಠ್ಯಪುಸ್ತಕಗಳು
ಬಾಗಲಕೋಟೆಗೆ ಸರಬರಾಜಾಗಿರುವ ಪಠ್ಯಪುಸ್ತಕಗಳು   

ಬಾಗಲಕೋಟೆ: ಬೇಸಿಗೆ ರಜೆ ನಂತರ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತೆ ಆರಂಭವಾಗಲಿದ್ದು, ಮಕ್ಕಳು ಶಾಲೆಗೆ ಹೋಗುವುದಕ್ಕಿಂತ ಮೊದಲೇ ಬಹುತೇಕ ಪಠ್ಯಪುಸ್ತಕಗಳು ಶಾಲೆ ತಲುಪಿವೆ.

ಜಿಲ್ಲೆಯಲ್ಲಿ 36.60 ಲಕ್ಷ ಪಠ್ಯಪುಸ್ತಕಗಳು ಉಚಿತವಾಗಿ ಹಂಚಿಕೆಯಾಗಬೇಕಿದ್ದು, ಈಗಾಗಲೇ 29.36 ಲಕ್ಷ ಪುಸ್ತಕಗಳು ಪೂರೈಕೆಯಾಗಿವೆ. ಖಾಸಗಿ ಶಾಲೆಗಳ ಮಕ್ಕಳಿಗೆ ಮಾರಾಟಕ್ಕಾಗಿ 10.42 ಲಕ್ಷ ಪಠ್ಯಪುಸ್ತಕಗಳಿಗೆ ಬೇಡಿಕೆ ಇದ್ದು, 8.59 ಲಕ್ಷ ಪುಸ್ತಕಗಳು ಪೂರೈಕೆಯಾಗಿವೆ.

ಕೆಲವು ವರ್ಷಗಳ ಹಿಂದೆ ಶಾಲೆ ಆರಂಭವಾಗಿ ತಿಂಗಳುಗಳು ಕಳೆದರೂ ಪಠ್ಯಪುಸ್ತಕಗಳ ಸರಬರಾಜು ಆಗುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಶಾಲೆ ಆರಂಭಕ್ಕೆ ಮೊದಲೇ ಪಠ್ಯಪುಸ್ತಕಗಳು ಸರಬರಾಜು ಆಗುತ್ತಿವೆ.

ADVERTISEMENT

ಸರಬರಾಜುದಾರರು ಹದಿನೈದು ದಿನಗಳ ಹಿಂದೆಯೇ ಪಠ್ಯಪುಸ್ತಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿಸಿದ್ದಾರೆ. ಅಲ್ಲಿಂದ ಅವುಗಳನ್ನು ಈಗಾಗಲೇ ಶಾಲೆಗಳಿಗೆ ತಲುಪಿಸಲಾಗಿದೆ. ಶುಕ್ರವಾರದಿಂದ ಶಾಲೆಗಳು ಆರಂಭವಾಗಲಿದ್ದು, ಪ್ರಾರಂಭೋತ್ಸವದಲ್ಲಿಯೇ ಮಕ್ಕಳಿಗೆ ಪುಸ್ತಕಗಳನ್ನು ಹಂಚಿಕೆ ಮಾಡಲು ಯೋಜಿಸಲಾಗಿದೆ.

ಗುರುವಾರವೇ ಶಾಲೆಗೆ ಬಂದಿದ್ದ ಶಿಕ್ಷಕರು, ಶಾಲೆಯನ್ನು ಸ್ವಚ್ಛಗೊಳಿಸಿ ಆರಂಭಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಮಕ್ಕಳನ್ನು ಸ್ವಾಗತಿಸುವುದಲ್ಲದೇ, ಹೊಸ ಮಕ್ಕಳ ದಾಖಲಾತಿ ಕಾರ್ಯವೂ ನಡೆಯಲಿದೆ.

ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಜಿಲ್ಲೆಯ ಹಲವು ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನೂ ಆರಂಭಿಸಲಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲಾಗುತ್ತಿದೆ. ಶಾಲೆಗಳತ್ತ ಮಕ್ಕಳನ್ನು ಕರೆ ತರಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. 

ಬಹುತೇಕ ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಅವುಗಳನ್ನು ಶಾಲೆಗೂ ತಲುಪಿಸಲಾಗಿದೆ. ಉಳಿದ ಪುಸ್ತಕಗಳೂ ನಿತ್ಯ ಬರುತ್ತಿವೆ.
– ಎಚ್‌.ಜಿ. ಮಿರ್ಜಿ, ಉಪನಿರ್ದೇಶಕ ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.