ADVERTISEMENT

ತಾಳ್ಮೆ ಹೊಂದಿದವನೇ ನಿಜವಾದ ತಪಸ್ವಿ

ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮೇ 2025, 16:33 IST
Last Updated 11 ಮೇ 2025, 16:33 IST
ರಾಂಪೂರ ಸಮೀಪದ ಅಚನೂರ ಗ್ರಾಮದಲ್ಲಿ ಲಕ್ಷ್ಮೀ ನರಸಿಂಹೇಶ್ವರ ಜಯಂತಿ ಹಾಗೂ ಗ್ರಾಮದೇವತೆಯ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು
ರಾಂಪೂರ ಸಮೀಪದ ಅಚನೂರ ಗ್ರಾಮದಲ್ಲಿ ಲಕ್ಷ್ಮೀ ನರಸಿಂಹೇಶ್ವರ ಜಯಂತಿ ಹಾಗೂ ಗ್ರಾಮದೇವತೆಯ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು   

ರಾಂಪುರ: ‘ಸಂತೋಷವಾಗಿ ಬದುಕಬೇಕು ಎನ್ನುವುದು ಎಲ್ಲರ ಅಪೇಕ್ಷೆಯಾಗಿದ್ದರೂ, ಹೇಗೆ ಬದುಕಿದರೆ ಸಂತೋಷವಾಗಿ ಇರಬಹುದು ಎನ್ನುವ ತಿಳಿವಳಿಕೆಯ ಕೊರತೆಯಿಂದಾಗಿ ಮನುಷ್ಯ ದು:ಖಿತನಾಗುತ್ತಿದ್ದಾನೆ’ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಅಚನೂರ ಗ್ರಾಮದಲ್ಲಿ ಲಕ್ಷ್ಮೀ ನರಸಿಂಹೇಶ್ವರ ಜಯಂತಿ ಹಾಗೂ ಗ್ರಾಮದೇವತೆಯ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸಂತಸಮಯ ಬದುಕಿಗೆ ಕೇವಲ ಅನ್ನ, ನೀರು, ಬಟ್ಟೆ, ಆಶ್ರಯ ಬೇಕಿಲ್ಲ. ಬದಲಾಗುತ್ತಿರುವ ಜಗತ್ತಿನ ತಿಳಿವಳಿಕೆ ಹೊಂದಿ ಇರುವುದನ್ನು ಒಪ್ಪಿಕೊಂಡು ಬದುಕಿದರೆ ಸಂತೋಷದ ಬದುಕು ಸಿಗುತ್ತದೆ ಎಂದರು.

ದೇವರು ಕೊಟ್ಟಿರುವ ನಿಸರ್ಗದಲ್ಲಿ ಎಲ್ಲವೂ ಇದೆ. ಬದುಕಿನಲ್ಲಿ ಬಡತನವಿರಲಿ, ಸೋಲಾಗಲಿ, ಅಪಮಾನ, ನಿಂದನೆಗಳು ಬರಲಿ ಅದಕ್ಕೆ ಚಿಂತಿತನಾಗದೇ ತಾಳ್ಮೆಯಿಂದಿದ್ದು, ತನಗೆ ಬಂದಿರುವ ಕಷ್ಟಗಳ ಕುರಿತು ಚಿಂತನೆ (ಆತ್ಮವಿಮರ್ಶೆ) ಮಾಡುತ್ತ, ದೇವರ ಇಚ್ಛೆಯಂತೆ ಬಾಳುವೆ ಎನ್ನುವ ನಿರ್ಧಾರ ತೆಗೆದುಕೊಂಡರೆ ಆವಾಗ ಸುಂದರ ಬದುಕು ಪ್ರಾಪ್ತವಾಗುತ್ತದೆ. ತಾಳ್ಮೆ, ಸ್ವಾಧ್ಯಾಯ ಹಾಗೂ ಈಶ್ವರ ಸನ್ನಿಧಾನ ನೆನಪಿಸಿಕೊಂಡು ಬದುಕಿದರೆ ಜೀವನ ಸಂತೋಷವಾಗಿರುತ್ತದೆ ಎಂದು ಹೇಳಿದರು.

ADVERTISEMENT

ತಾಳ್ಮೆ ಹೊಂದಿದವನೇ ನಿಜವಾದ ತಪಸ್ವಿ. ಜೀವನ ಅಂದ ಮೇಲೆ ಕಷ್ಟ, ಸು:ಖ ಬರುವುದೇ. ಶ್ರೀರಾಮಚಂದ್ರ, ಸತ್ಯಹರಿಶ್ಚಂದ್ರರಿಗೂ ಕಷ್ಟಗಳು ಬಂದವು. ಆದರೆ ಅವರೆಲ್ಲ ತಪಸ್ವಿಗಳಾಗಿ ಎಲ್ಲವನ್ನೂ ಸಹಿಸಿಕೊಂಡು ಬದುಕಿರುವುದು ನಮ್ಮ ಕಣ್ಮುಂದೆ ಇದೆ. ಹೀಗಿರುವಾಗ ದೇವರು ಕರುಣಿಸಿದ ಮನುಷ್ಯ ದೇಹಕ್ಕೆ ಎಷ್ಟೇ ಕಷ್ಟ ಬಂದರೂ ಸಹನಶೀಲತೆಯಿಂದ ನಿನ್ನಿಚ್ಛೆಯಂತೆ ಬದುಕುವೆ ಎಂಬ ಭರವಸೆಯಿಂದ ಬಾಳಿದರೆ ಸಂತೋಷದ ಬದುಕು ನಮ್ಮದಾಗುವುದು.

ಜಾತಿ, ಪಂಗಡ, ಪಕ್ಷ ಬೇಧ ಮರೆತು ಎಲ್ಲರೂ ಒಟ್ಟಾಗಿ ಹಳ್ಳಿಗಳ ಅಭಿವೃದ್ಧಿಗೆ ದುಡಿಯುವುದೇ ಹಳ್ಳಿಗಳ ವೈಭವ ಎಂದ ಪೂಜ್ಯರು, ಪ್ರತಿಯೊಬ್ಬರೂ ಜೀವನದಲ್ಲಿ ಬರುವ ಕಷ್ಟ, ಸು:ಖಗಳನ್ನು ಸಮನಾಗಿ ಸ್ವೀಕರಿಸಿ ತಾಳ್ಮೆಯಿಂದ ಜೀವನ ಮಾಡಬೇಕು. ಯಾರು ತಾಳ್ಮೆಯ ಗುಣ ಬೆಳೆಸಿಕೊಳ್ಳುತ್ತಾರೋ ಅವರೇ ತಪಸ್ವಿಗಳು ಎಂದರು.

ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಗ್ರಾಮೀಣ ಪಿಎಸ್‌ಐ ಶರಣಬಸಪ್ಪ ಸಂಗಳದ ಅವರನ್ನು ಸನ್ಮಾನಿಸಲಾಯಿತು. ಮುಚಖಂಡಿಯ ಪ್ರಭು ಸ್ವಾಮೀಜಿ ಸರಣಾಚಾರಿ ಮುಂತಾದವರು ಪಾಲ್ಗೊಂಡಿದ್ದರು.

ಮಹಿಳೆಯರು ಕುಂಭಹೊತ್ತು ಮೆರವಣಿಗೆ ಸಂಭ್ರಮದಿಂದ ನಡೆಯಿತು. ಶ್ರೀಗಳ ಪ್ರವಚನ ಆಲಿಸಲು ಗ್ರಾಮದ ಸುತ್ತಲಿನ ಸಾವಿರಾರು ಸಂಖ್ಯೆಯ ಭಕ್ತರು ಬಂದಿದ್ದರು.

ಮಕ್ಕಳಿಗೆ ಅಪಾರ ಸಂಪತ್ತು ಗಳಿಸಿಟ್ಟು ಹೋದವರು ನಿಜವಾದ ತಂದೆ ತಾಯಿಗಳಲ್ಲ. ಒಳ್ಳೆಯ ಸಂಸ್ಕಾರ ಕೊಟ್ಟು ಸಂತೋಷದ ಬದುಕಲು ಕಲಿಸಿ ಹೋದವರು ನಿಜವಾದ ತಂದೆ ತಾಯಿಗಳು.
–ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಗವಿಮಠ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.