ADVERTISEMENT

ವ್ಯಸನಮುಕ್ತ ದಿನಾಚರಣೆ : ವಿದ್ಯಾರ್ಥಿಗಳಿಂದ ಜನಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2018, 16:46 IST
Last Updated 1 ಆಗಸ್ಟ್ 2018, 16:46 IST
ಇಳಕಲ್ ಮಹಾಂತ ಶ್ರೀಗಳ 89ನೇ ಜನ್ಮದಿನದ ಅಂಗವಾಗಿ ನಡೆದ ವ್ಯಸನಮುಕ್ತ ದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಗುರುಮಹಾಂತ ಶ್ರೀಗಳು ಪ್ರಮಾಣವಚನ ಬೋಧಿಸಿದರು.
ಇಳಕಲ್ ಮಹಾಂತ ಶ್ರೀಗಳ 89ನೇ ಜನ್ಮದಿನದ ಅಂಗವಾಗಿ ನಡೆದ ವ್ಯಸನಮುಕ್ತ ದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಗುರುಮಹಾಂತ ಶ್ರೀಗಳು ಪ್ರಮಾಣವಚನ ಬೋಧಿಸಿದರು.   

ಇಳಕಲ್ : ಲಿಂಗೈಕ್ಯ ಮಹಾಂತ ಶ್ರೀಗಳ 89ನೇ ಜನ್ಮದಿನದ ಅಂಗವಾಗಿ ಬುಧವಾರ ವ್ಯಸನಮುಕ್ತ ದಿನಾಚರಣೆ ಅಂಗವಾಗಿ ನಗರದ 50ಕ್ಕೂ ಹೆಚ್ಚು ಶಾಲಾ ಹಾಗೂ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಜನಜಾಗೃತಿ ಜಾಥಾ ನಡೆಸಿದರು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಘೋಷಣೆಗಳನ್ನು ಕೂಗಿದರು. ಭಿತ್ತಿಫಲಕಗಳನ್ನು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶ್ರೀಮಠಕ್ಕೆ ಬಂದರು.

ಮುಂಡರಗಿಯ ನಿಜಗುಣ ಪ್ರಭು ಸ್ವಾಮೀಜಿ ಮಾತನಾಡಿ, ‘ದೊಡ್ಡ ಅಜ್ಜಾರು (ಡಾ.ಮಹಾಂತ ಶ್ರೀಗಳು) ವೈಚಾರಿಕ ಹಾಗೂ ಆರೋಗ್ಯಕರ ಸಮಾಜ ಕಟ್ಟಲು ಅವಿರತವಾಗಿ ಶ್ರಮಿಸಿದರು. ಬಸವತತ್ವದ ಪ್ರಸಾರ ಹಾಗೂ ಅನುಷ್ಠಾನಕ್ಕಾಗಿ ತಮ್ಮನ್ನೆ ಅರ್ಪಿಸಿಕೊಂಡಿದ್ದರು. ಮೂಢನಂಬಿಕೆ, ಕಂದಾಚಾರವನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಮಹಾಂತ ಜೋಳಿಗೆಯ ಮೂಲಕ ನಾಡಿನುದ್ದಕ್ಕೂ ಸಂಚರಿಸಿ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಅನೇಕರ ಜೀವನ ಬೆಳಗಿದರು’ ಎಂದು ಸ್ಮರಿಸಿದರು.

ವಿದ್ಯಾರ್ಥಿಗಳಿಗೆ ‘ಜೀವನದಲ್ಲಿ ಯಾವುತ್ತೂ ದುಶ್ಚಟಗಳಿಗೆ ಬಲಿಯಾಗುವುದಿಲ್ಲ, ನನ್ನ ಸಂಪರ್ಕಕ್ಕೆ ಬರುವವರಲ್ಲಿ ವ್ಯಸನಗಳಿದ್ದರೇ ವ್ಯಸನಗಳನ್ನು ತ್ಯಜಿಸುವಂತೆ ಅವರಿಗೆ ಮನವಿ ಮಾಡುತ್ತೇನೆ’ ಎಂದು ಗುರುಮಹಾಂತಶ್ರೀಗಳು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ ಇಳಕಲ್‌ ತಾಲ್ಲೂಕು ಘಟಕದ ಅಧ್ಯಕ್ಷ ಅಧ್ಯಕ್ಷ ಸಂಗಣ್ಣ ಗದ್ದಿ ಮಾತನಾಡಿ, ‘ಮಹಾಂತ ಶ್ರೀಗಳ ವೈಚಾರಿಕ ನಿಲುವು, ಬಸವ ತತ್ವದ ಅನುಷ್ಠಾನದ ವಿಷಯದಲ್ಲಿದ್ದ ನಿಷ್ಠುರತೆ, ವ್ಯಸನಮುಕ್ತ ಸಮಾಜಕ್ಕಾಗಿ ಇದ್ದ ಹಂಬಲ ಅವರನ್ನು ಸದಾ ಸ್ಮರಣೀಯರನ್ನಾಗಿವೆ. ಮಾತೃ ಹೃದಯಿ, ಸಂಪತ್ತಿನ ನಿರ್ಮೋಹಿ ಅವರಾಗಿದ್ದರು’ ಎಂದು ನೆನಪಿಸಿಕೊಂಡರು.

ಮುದಗಲ್ ಮಹಾಂತಶ್ರೀಗಳು ಹಾಗೂ ತಹಶೀಲ್ದಾರ್‌ ಸುಭಾಷ ಸಂಪಗಾವಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಖುರ್ಷಿದಾಬೇಗಂ ಗದ್ವಾಲ್, ಉಪಾಧ್ಯಕ್ಷ ಮಹಾಂತೇಶ ಹನಮನಾಳ, ಸದಸ್ಯರಾದ ತೇಜಮ್ಮ ವದ್ದಿ, ಜಯಲಕ್ಷ್ಮಿ ಯಂಗಾಲಿ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್‌ ಎಂ.ಜಿ. ಪಟ್ಟಣಶೆಟ್ಟರ್‌, ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ತಿಮ್ಮಣ್ಣ ಭೋಗಾಪೂರ, ಗುರಣ್ಣ ಮರಟದ, ಎಂ.ಎಸ್. ವಾಲಿ, ಎನ್.ಎಲ್. ಕನ್ನೂರ, ಶರಣಪ್ಪ ಅಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.