ADVERTISEMENT

‘ವೇಮನರ ತತ್ವಾದರ್ಶ ಅಳವಡಿಸಿಕೊಳ್ಳಿ’

ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:15 IST
Last Updated 30 ಜುಲೈ 2023, 15:15 IST
ಮುಧೋಳ ನಗರದಲ್ಲಿ ಭಾನುವಾರ ಕಾರ್ಯಕ್ರಮದಲ್ಲಿ ನಾಲ್ವರು ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು
ಮುಧೋಳ ನಗರದಲ್ಲಿ ಭಾನುವಾರ ಕಾರ್ಯಕ್ರಮದಲ್ಲಿ ನಾಲ್ವರು ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು   

ಮುಧೋಳ: ‘ವೇಮನರ ತತ್ವ, ಹೇಮರಡ್ಡಿ ಮಲ್ಲಮ್ಮಳ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ನಡೆಸಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಬಿ.ಗೌಡಪ್ಪಗೋಳ ಹೇಳಿದರು.

 ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಬೆನಕಟ್ಟಿಯ ಹೇಮ-ವೇಮನ ಸದ್ಬೋಧನ ಪೀಠದ 14 ನೇ ವಾರ್ಷಿಕೋತ್ಸವ, ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿಸರ್ಗ ಚಿಕಿತ್ಸಕ ಡಾ.ಎಚ್.ಟಿ.ಮಳಲಿ ಮಾತನಾಡಿ, ‘ಮನುಷ್ಯನಿಗೆ ಇಂದು ಅಧ್ಯಾತ್ಮದ ಜ್ಞಾನ ಬೇಕಿದ್ದು, ಶಿಕ್ಷಣದಲ್ಲಿ ಆಧ್ಯಾತ್ಮಿಕ ಶಿಕ್ಷಣ ನೀಡಬೇಕಿದೆ. ಅದರಿಂದ ನೆಮ್ಮದಿ, ಆನಂದದ ಜೀವನ ಲಭಿಸಬಹುದು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಯ ಅಧ್ಯಕ್ಷ ದಯಾನಂದ ಪಾಟೀಲ, ‘ಪರೋಪಕಾರದಿಂದ ಇನ್ನೊಬ್ಬರ ಬದುಕಿಗೆ ನೆರವಾಗುವುದೇ ಶ್ರೇಷ್ಠ ಕಾರ್ಯ’ ಎಂದರು.

ತೊಂಡಿಕಟ್ಟಿಯ ವೆಂಕಟೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೂವರು ಪಿಯುಸಿ ಹಾಗೂ ಮೆಡಿಕಲ್ ಓದುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಯಿತು.

ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ತಂಡದವರು ವೇಮನರ ವಚನ ಪಠಿಸಿದರು. ಡಾ.ಸತೀಶ ಮಲಘಾಣ ಸ್ವಾಗತಿಸಿದರು. ರಮೇಶ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ರೂಗಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.