ADVERTISEMENT

ಬಾಗಲಕೋಟೆ: ಕೃಷಿ, ತೋಟಗಾರಿಕೆ ಉತ್ಪನ್ನಗಳ ಖರೀದಿ ಮತ್ತು ಮಾರಾಟದಾರರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 2:07 IST
Last Updated 22 ಜುಲೈ 2025, 2:07 IST
ಬಾಗಲಕೋಟೆಯಲ್ಲಿ ಸೋಮವಾರ ನಡೆದ ಕೃಷಿ, ತೋಟಗಾರಿಕೆ ಉತ್ಪನ್ನಗಳ ಮಾರಾಟಗಾರರ, ಖರೀದಿದಾರ ಮೇಳದಲ್ಲಿನ ಉತ್ಪನ್ನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ವೀಕ್ಷಿಸಿದರು
ಬಾಗಲಕೋಟೆಯಲ್ಲಿ ಸೋಮವಾರ ನಡೆದ ಕೃಷಿ, ತೋಟಗಾರಿಕೆ ಉತ್ಪನ್ನಗಳ ಮಾರಾಟಗಾರರ, ಖರೀದಿದಾರ ಮೇಳದಲ್ಲಿನ ಉತ್ಪನ್ನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ವೀಕ್ಷಿಸಿದರು   

ಬಾಗಲಕೋಟೆ: ‘ರೈತರ ಉತ್ಪನ್ನಗಳನ್ನು ರಫ್ತು ಮಾಡಿ, ಉತ್ತಮ ಬೆಲೆ ಕೊಡಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ರಫ್ತು ಕೇಂದ್ರ ತೆರೆಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ತೋಟಗಾರಿಕೆ ವಿವಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕೃಷಿ, ತೋಟಗಾರಿಕೆ, ಕೆಪೆಕ್ ಮತ್ತು ತೋಟಗಾರಿಕೆ ವಿವಿ ಸಹಯೋಗದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಖರೀದಿದಾರರ ಮತ್ತು ಮಾರಾಟಗಾರರ ಸಮ್ಮೇಳನ-ಸಂವಾದ ಹಾಗೂ ಸಿರಿಧಾನ್ಯ ಮೇಳ ಉದ್ಘಾಟಿಸಿ ಮಾತನಾಡಿದರು.

‘ರೈತ ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಆದರೆ, ಉತ್ತಮ ಬೆಲೆ ಸಿಗುವುದಿಲ್ಲ. ಆಧುನಿಕ ಜಗತ್ತಿಗೆ ತಕ್ಕಂತೆ ಉತ್ಪನ್ನಗಳಿಗೆ ಬ್ರ್ಯಾಂಡ್ ರೂಪ ಕೊಟ್ಟು ಮಾರುಕಟ್ಟೆಗೆ ತಂದಲ್ಲಿ ಉತ್ತಮ ಬೆಲೆ ಸಿಗುತ್ತದೆ’ ಎಂದರು.

ADVERTISEMENT

‘ಕೃಷಿಯಿಂದ ಯುವಕರು ಬಹಳಷ್ಟು ದೂರ ಉಳಿಯುತ್ತಿದ್ದಾರೆ. ಇದಕ್ಕೆ ಕಾರಣ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗುವುದಿಲ್ಲ. ಅದನ್ನು ಹೋಗಲಾಡಿಸಬೇಕು. ಮಾರುಕಟ್ಟೆ ಒದಗಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ‘ರೈತರು ಮಧ್ಯವರ್ತಿಗಳಿಂದ ನಲುಗಿ ಹೋಗುತ್ತಿದ್ದಾರೆ. ಕೃಷಿ, ತೋಟಗಾರಿಕೆ ಬೆಳೆಗಳನ್ನು ಆಸಕ್ತಿಯಿಂದ ಬೆಳೆಯುತ್ತಾರೆ. ಈ ನಿಟ್ಟಿನಲ್ಲಿ ಇಲಾಖೆ, ತೋಟಗಾರಿಕೆ ವಿವಿಯು ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಆಗಬೇಕು. ಆಗ ರೈತ ಆರ್ಥಿಕವಾಗಿ ಬಲಿಷ್ಟರಾಗಲು ಸಾಧ್ಯವಾಗುತ್ತದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ‘ರೈತರ ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರ ಸಿಕ್ಕಾಗು ಮಾರುಕಟ್ಟೆ ಸಿಗುತ್ತದೆ. ಪ್ರಚಾರ ನೀಡುವಲ್ಲಿ ವಿಫಲರಾಗುತ್ತಿದ್ದೇವೆ. ಅವರಿಗೆ ಯೋಗ್ಯವಾದ ಪ್ರತಿಫಲ ಸಿಗುತ್ತಿಲ್ಲ. ಇದರಿಂದ ರೈತರ ಆತ್ಮಹತ್ಯೆ ಸಂಭವಿಸುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ‘ರೈತರ ಆತ್ಮಹತ್ಯೆಗೆ ಕಾರಣಗಳನ್ನು ತಿಳಿದುಕೊಂಡು, ಅವುಗಳನ್ನು ಪರಿಹರಿಸಿ ಮತ್ತೆ ಅಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು’ ಎಂದರು.

2024-25ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಪಡೆದ 10 ಜನ ರೈತರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಹಾಪ್ ಕಾಮ್ಸ್ ಅಧ್ಯಕ್ಷ ಈರಪ್ಪ ಅರಕೇರಿ, ತೋಟಗಾರಿಕೆ ವಿವಿ ಕುಲಪತಿ ವಿಷ್ಣುವರ್ಧನ, ಲಾಲ್‍ಬಾಗನ ತೋಟಗಾರಿಕೆ ಹೆಚ್ಚುವರಿ ನಿರ್ದೇಶಕ ಪಿ.ಎಂ.ಸೊಬರದ, ಕಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ, ಪ್ರಧಾನ ವ್ಯವಸ್ಥಾಪಕ ಎಚ್.ಕೆ.ಶಿವಕುಮಾರ, ಬೆಳಗಾವಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಐ.ಕೆ.ದೊಡ್ಡಮನಿ ಇದ್ದರು. 

ಮಳಿಗೆ ಖಾಲಿ ಖಾಲಿ

ಸಭಾಂಗಣದ ಆವರಣದಲ್ಲಿ 15 ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿಯೂ ನಾಲ್ಕು ಮಳಿಗೆಗಳು ಖಾಲಿ ಇದ್ದವು. ಜಿಲ್ಲೆಯ ರೈತರಿಗೆ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಎಫ್‌ಪಿಒಗಳಿಗೆ ಮಾಹಿತಿ ನೀಡಿದ್ದರಿಂದ ಅವರೇ ವಾಹನಗಳಲ್ಲಿ ಕೆಲವರನ್ನು ಕರೆದುಕೊಂಡು ಬಂದಿದ್ದರು.

₹249 ಕೋಟಿ ಒಪ್ಪಂದ

ಬಾಗಲಕೋಟೆ: ತೋಟಗಾರಿಕೆ ವಿವಿಯಲ್ಲಿ ನಡೆದ ಕೃಷಿ ತೋಟಗಾರಿಕೆ ಉತ್ಪನ್ನಗಳ ಖರೀದಿದಾರರ ಮತ್ತು ಮಾರಾಟಗಾರರ ಸಮ್ಮೇಳದಲ್ಲಿ ರೈತರು ಮತ್ತು ಖರೀದಿದಾರರ ನಡುವೆ ₹249 ಕೋಟಿ ಒಪ್ಪಂದ ಮಾಡಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.