ಬಾಗಲಕೋಟೆ: ತಮ್ಮದು ಕೊಟ್ಟ ಮಾತು ಉಳಿಸಿಕೊಳ್ಳುವ ಸರ್ಕಾರ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಶಾ ಕಾರ್ಯಕರ್ತರಿಗೆ ಕೊಟ್ಟ ಮಾತನ್ನೇ ಮರೆತಿದ್ದಾರೆ. ಕೂಡಲೇ ಆಶಾ ಕಾರ್ಯಕರ್ತೆಯರ ಗೌರವಧನವನ್ನು ₹10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಎಐಕೆಕೆಎಂಎಸ್‍ನ ರಾಜ್ಯ ಕಾರ್ಯದರ್ಶಿ ಬಿ. ಭಗವಾನ್‍ರೆಡ್ಡಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ 7 ತಿಂಗಳ ಹಿಂದೆ ಘೋಷಿಸಿದ ಗೌರವ ಧನವನ್ನು ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬುಧವಾರವೂ ಮುಂದುವರೆದಿರುವ ಅಹೋರಾತ್ರಿ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಅವರು, ಶ್ರಮ ಜೀವಿಗಳಾದ ಆಶಾಗಳ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ಅವೈಜ್ಞಾನಿಕ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಮಂಗಳವಾರ ರಾತ್ರಿಯಿಡೀ ಧರಣಿ ಸ್ಥಳದಲ್ಲಿಯೇ ನೂರಾರು ಸಂಖ್ಯೆಯ ಕಾರ್ಯಕರ್ತರು ಮಲಗಿದ್ದರು. ಮಳೆ, ಚಳಿಯನ್ನು ಲೆಕ್ಕಿಸದೇ ಧರಣಿ ಮುಂದುವರೆಸಿದ್ದರು.
ಬೆಂಬಲ: ಹಿಂದುಳಿದ ವರ್ಗಗಳ (ಒಬಿಸಿ) ರಾಜ್ಯ ನಾಯಕ ಬಸವರಾಜ ಬಾಗೇವಾಡಿ, ಅಂಬರೀಶ, ಜಯಕರ್ನಾಟಕ ಸಂಘಟನೆಯ ಸಲೀಂ, ನಿವೃತ್ತ ಉಪನ್ಯಾಸಕಿ ಲಲಿತಾ ಬಿಜ್ಜರಗಿ, ಬಹು ಹಳ್ಳಿ ಕುಡಿಯುವ ನೀರು ಸರಬರಾಜು ನೌಕರರ ಗಾರರ ಸಂಘದ ರಮೇಶ ಬಂಡಿವಡ್ಡರ ಬೆಂಬಲಿಸಿ ಮಾತನಾಡಿದರು. ನಾರಾಯಣ ಇಂಗಳೆ ಇದ್ದರು.
ಸಕಾರಾತ್ಮಕ ಸ್ಪಂದನೆ: ನಂಜಯ್ಯನಮಠ ಭರವಸೆ
ಬಾಗಲಕೋಟೆ: ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿಯ ಧರಣಿ ನಿರತರನ್ನು ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿತು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜ್ಯಯನಮಠ ಮಾತನಾಡಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶೀಘ್ರದಲ್ಲೇ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷ ಕಾರ್ಮಿಕ ವರ್ಗದ ಹಕ್ಕುಗಳಿಗೆ ಬದ್ಧವಾಗಿದೆ. ಆಶಾ ಕಾರ್ಯಕರ್ತೆಯರ ಹೋರಾಟ ನ್ಯಾಯಸಮ್ಮತವಾಗಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ ಮಾತನಾಡಿ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಡಿ. ನಿಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದರು. ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ನ್ಯಾಮಗೌಡ ನಗರಸಭೆ ಸದಸ್ಯೆ ಮಂಜುಳಾ ಭುಸಾರೆ ಶಂಕರ ತಪಶೆಟ್ಟಿ ರೇಣುಕಾ ನಾರಾಯಣಕರ ಅಭಿಷೇಕ ತಳ್ಳಿಕೇರಿ ಮುಮತಾಜ್ ಸುತಾರ ಇದ್ದರು.
ಪ್ರತಿಭಟನೆಗೆ ಮಾಜಿ ಶಾಸಕ ಚರಂತಿಮಠ ಬೆಂಬಲ
ಬಾಗಲಕೋಟೆ: ತಿಂಗಳಿಗೆ ಕನಿಷ್ಠ 10 ಸಾವಿರ ಗೌರವಧನ ನೀಡಬೇಕು ಎಂಬುದು ಸೇರಿದಂತೆ 9 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಬೆಂಬಲಿಸಿದರು. ಅಲ್ಲಿ ಮಾತನಾಡಿದ ಅವರು ಪಕ್ಷ ರಾಜ್ಯ ಅಧ್ಯಕ್ಷರಿಗೆ ಹಾಗೂ ವಿಧಾನಸಭೆ ವಿರೋಧ ಪಕ್ಷ ನಾಯಕರಿಗೆ ಕೂಡಲೇ ಮನವಿ ತಲುಪಿಸಿ ಅಧಿವೇಶನದಲ್ಲಿ ನಿಮ್ಮ ಪರ ದ್ವನಿ ಎತ್ತಿ ಬೇಡಿಕೆ ಈಡೆರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ನ್ಯಾಯಯುತವಾದ ಬೇಡಿಕೆಗಳನ್ನು ಆದಷ್ಟು ಬೇಗ ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.