ಕೆರೂರ : ಆಶ್ರಯ ಮನೆ ನಿವೇಶನಕ್ಕಾಗಿ ಕಳೆದ 15 ದಿನಗಳಿಂದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಧರಣಿ ನಡೆಸುತ್ತಿದ್ದ, ರೈತ ಸಂಘದವರು ಗುರುವಾರ ಧರಣಿಯನ್ನು ಮೊಟುಕುಗೊಳಿಸಿದರು.
ಆಶ್ರಯ ಮನೆ ನಿವೇಶನ ಹಾಗೂ ಹಕ್ಕು ಪತ್ರ ವಿತರಣೆ ಹಂಚಿಕೆ ಮಾಡದೆ ಇರುವುದನ್ನು ಖಂಡಿಸಿ ಕಳೆದ 15 ದಿನಗಳಿಂದ ರೈತ ಸಂಘದವರು ಪಟ್ಟಣ ಪಂಚಾಯಿತಿ ವಿರುದ್ಧ ಧರಣಿ ನಡೆಸುತ್ತಿದ್ದರು, ಫಲಾನುಭವಿಗಳನ್ನು ಆಯ್ಕೆ ಮಾಡಿ 10 ವರ್ಷಗಳು ಕಳೆದರೂ ಅವರಿಗೆ ನಿವೇಶನ ಹಾಗೂ ಹಕ್ಕು ಪತ್ರ ವಿತರಣೆ ಮಾಡದೆ ಸತಾಯಿಸಲಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಧರಣಿ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಆಗಮಿಸಿ, ‘ಈ ಹಿಂದೆ ಆಯ್ಕೆಯಾದ 205 ಫಲಾನುಭವಿಗಳಲ್ಲಿ ವ್ಯತ್ಯಾಸ ಮಾಡದೆ, ಎಲ್ಲರಿಗೂ ಮನೆ ಹಂಚಿಕೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹೊಸದಾಗಿ ಸರ್ಕಾರದಿಂದ ಆಶ್ರಯ ಮನೆ ಗುರಿ ನಿಗದಿಯಾಗಬೇಕಿದೆ’ ಎಂದರು.
ಸರ್ಕಾರ ಹೊಸದಾಗಿ ಆದೇಶ ಹೊರಡಿಸಿದರೆ ಪ್ರಥಮ ಆದ್ಯತೆ 205 ಫಲಾನುಭವಿಗಳಿಗೆ ನೀಡಲಾಗುವುದು. ಹೆಚ್ಚುವರಿ ಮನೆ ಹಂಚಿಕೆಯಾದರೆ ಉಳಿದ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಭಯವನ್ನು ನೀಡಿದ್ದಾರೆ. ಧರಣಿಯನ್ನು ನಿಲ್ಲಿಸಬೇಕು ಎಂದು ಮನವಿಮಾಡಿಕೊಂಡರು.
ಆಶ್ರಯ ಮನೆ ಫಲಾನುಭವಿಗಳು ಸರ್ಕಾರದ ಯಾವುದೇ ವಸತಿ ಯೋಜನೆಯಡಿ ಸಹಾಯಧನ ಪಡೆದುಕೊಂಡು ಮನೆ ನಿರ್ಮಾಣ ಮಾಡಿಕೊಂಡಿದ್ದರೆ ಅಂಥವರಿಗೆ ನಿವೇಶನ ನೀಡಲಾಗುವುದಿಲ್ಲ ಎಂದು ಹೇಳಿದರು.
‘ಶಾಸಕರು ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದು ಸಂತಸ ತಂದಿದೆ, ಸರ್ಕಾರ ಹೊಸದಾಗಿ ಆಶ್ರಯ ಮನೆ ನಿಗದಿ ಪಡಿಸಿದರೆ ಮೊದಲ ಆದ್ಯತೆ ನಿಮಗೆ ನೀಡಲಿದ್ದಾರೆ, ಫಲಾನುಭವಿಗಳು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಗೋನಾಳ ಹೇಳಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾನಂದ ಮದಿ,ಪಿಎಸ್ ಐ ಭೀಮಪ್ಪ ರಬಕವಿ,ರೈತ ಸಂಘದ ಗೋವಿಂದಪ್ಪ ಬೆಳಗಂಟಿ, ಹುಸೇನಸಾಬ ಮಾಲದಾರ್, ಗುಡುಮಾ ವಾಲಿಕಾರ್, ಮಮತಾಜ ಮುಜಾವರ ಧರಣಿಯಲ್ಲಿ ಪಾಲ್ಗೊಂಡ ಫಲಾನುಭವಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.