
ಬಾಲ್ಯವಿವಾಹ (ಪ್ರಾತಿನಿಧಿಕ ಚಿತ್ರ)
ಬಾಗಲಕೋಟೆ: ಜಿಲ್ಲೆಯ 50 ಗ್ರಾಮಗಳಲ್ಲಿ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದ ಅಂಗವಾಗಿ ಜಾಗೃತಿ ಆಂದೋಲನ ನಡೆಸಲಾಗಿದೆ ಎಂದು ರೀಚ್ ಸಂಸ್ಥೆಯ ನಿರ್ದೇಶಕ ಜಿ.ಎನ್.ಸಿಂಹ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕರೆಯ ಮೇರೆಗೆ ಜಿಲ್ಲೆಯ 50 ಗ್ರಾಮಗಳಲ್ಲಿ 1600 ಜನರನ್ನು ಒಗ್ಗೂಡಿಸಿ ಬಾಲ್ಯವಿವಾಹ ತಡೆಗಟ್ಟುವ ಜಾಗೃತಿ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಸಹಯೋಗದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಕಾರ್ಯದಲ್ಲಿ ರೀಚ್ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತಿದೆ. 2023-24ನೇ ಸಾಲಿನಲ್ಲಿ 60ಕ್ಕೂ ಅಧಿಕ ಬಾಲ್ಯವಿವಾಹಗಳನ್ನು ಸಂಸ್ಥೆ ತಡೆದಿದೆ. ಇಷ್ಟು ಜಾಗೃತಿ ನಂತರವೂ ಬಾಲ್ಯವಿವಾಹ ಪ್ರಕರಣಗಳು ದಾಖಲಾಗುತ್ತಿವೆ. ಅವುಗಳನ್ನು ತಡೆಗಟ್ಟುವಲ್ಲಿ ಸಾಮಾಜಿಕ ಜಾಗೃತಿ ವ್ಯಾಪಕವಾಗಿ ಮೂಡಬೇಕಿದೆ. ಬಾಲ್ಯವಿವಾಹ ಮಾಡಿದವರನ್ನು ಶಿಕ್ಷೆಗೆ ಒಳಪಡಿಸಿ ಅದರ ವಿವರಣೆಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದಾಗಿದೆ’ ಎಂದು ತಿಳಿಸಿದರು.
ಬಾಲ್ಯವಿವಾಹಕ್ಕೆ ಒಳಗಾಗಿ ನೊಂದಿರುವ ಮಹಿಳೆ ಸುಧಾ ಮಾತನಾಡಿ, ‘ನನಗೆ 5ನೇ ವರ್ಷಕ್ಕೆ ಮದುವೆ ಮಾಡಿಕೊಡಲಾಗಿತ್ತು. ಮುಂದೆ 16ನೇ ವಯಸ್ಸಿಗೆ ಗಂಡನ ಮನೆಗೆ ಕಳುಹಿಸಲಾಯಿತು. ಆಟ ಆಡುವ ವಯಸ್ಸಿಗೆ ಗರ್ಭಿಣಿಯಾಗಿ ಎರಡು ಮಕ್ಕಳ ತಾಯಿಯಾದೆ. ಶಿಕ್ಷಣದಿಂದ ವಂಚಿತಳಾದೆ. ನಾವು ಜಾಗೃತರಾಗಿ ಧ್ವನಿ ಎತ್ತುವುದನ್ನು ಕಲಿಯಬೇಕು. ಸದ್ಯ ರೀಚ್ ಸಂಸ್ಥೆಯಲ್ಲಿ ಸ್ವಯಂ ಸೇವಕಳಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ವಿವರಿಸಿದರು.
ಸಂಸ್ಥೆಯ ಸಂಯೋಜಕ ಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.