ಬಾಗಲಕೋಟೆ: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಭಾಗವಾಗಿ ಆರ್.ಆರ್.ಸಂಖ್ಯೆ (ವಿದ್ಯುತ್ ಮೀಟರ್) ಮೂಲಕ ಮನೆಗಳನ್ನು ಗುರುತಿಸುವ ಕಾರ್ಯ ಜಿಲ್ಲೆಯಲ್ಲಿ ಆರಂಭವಾಗಿದೆ. ವಿದ್ಯುತ್ ಮೀಟರ್ ರೀಡರ್‌ಗಳ ಮೂಲಕ ಪ್ರತಿ ಮನೆಗೆ ಜಿಯೋ ಟ್ಯಾಗಿಂಗ್ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಅಂದಾಜು 4.24 ಲಕ್ಷ ವಿದ್ಯುತ್ ಮೀಟರ್‌ಗಳಿವೆ ಎಂದು ಅಂದಾಜಿಸಲಾಗಿದೆ. ಈ ಎಲ್ಲ ಮನೆಗಳಿಗೆ ಜಿಯೋ ಟ್ಯಾಗಿಂಗ್ ಮಾಡುವ ಕಾರ್ಯ ಈಗಾಗಲೇ ಆರಂಭವಾಗಿದೆ. ಹೆಸ್ಕಾಂ ಸಿಬ್ಬಂದಿ ಮನೆಗಳಿಗೆ ತೆರಳಿ ಸರ್ವೆ ಸ್ಟಿಕ್ಕರ್ ಅಂಟಿಸುವ ಕೆಲಸ ಮಾಡುತ್ತಿದ್ದಾರೆ. ಸ್ಟಿಕ್ಕರ್ ತೆಗೆಯಬಾರದು ಎಂಬುದತ ಜೊತೆಗೆ ಸಹಾಯವಾಣಿ ಸಂಖ್ಯೆಯನ್ನೂ ನಮೂದಿಸಲಾಗಿದೆ. ಇದರ ನಂತರ ಗಣತಿ ಕಾರ್ಯ ಆರಂಭಗೊಳ್ಳಲಿದೆ.
ಮೀಟರ್ ರೀಡರ್‌ಗಳು ಮನೆಗಳನ್ನು ಗುರುತಿಸಿ, ಯುಎಚ್‌ಐಡಿ ಸಂಖ್ಯೆ ನೀಡುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಿಕ್ಷಕರು ಗಣತಿ ಆರಂಭಿಸಲಿದ್ದಾರೆ. ದಸರಾ ರಜೆಯ ಅವಧಿಯಲ್ಲಿ ಗಣತಿದಾರರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆ ಸೆ.22 ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ. ಶಾಲಾ ರಜಾದಿನಗಳಿರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಸಹಾಯವಾಗಲಿದೆ. ಜಿಯೋ ಟ್ಯಾಗ್ ಮಾಡಿರುವ ಮನೆಗಳಲ್ಲಿ ವಾಸವಿರುವ ಕುಟುಂಬದವರ ಮಾಹಿತಿಯನ್ನು ಆ್ಯಪ್ ಮೂಲಕ ಅಪ್‌ಲೋಡ್ ಮಾಡಲಿದ್ದಾರೆ.
ಮೀಟರ್ ರೀಡರ್‌ಗಳು ನಮೂದಿಸಿದ ಡೇಟಾವನ್ನು ಇಡಿಸಿಎಸ್ (ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ) ಸರ್ವರ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ನಂತರ ದ್ವಿತೀಯ ದತ್ತಾಂಶಗಳನ್ನು ಆಧರಿಸಿ, ಮೌಲೀಕರಿಸಿದ ನಂತರ 'ಮನೆ ಪಟ್ಟಿ' ಸಮೀಕ್ಷೆಯ ಉದ್ದೇಶಕ್ಕಾಗಿ 'ಮ್ಯಾಪಿಂಗ್' ಮಾಡಲಾಗುತ್ತದೆ. ಯುಎಚ್‌ಐಡಿಯ ಜತೆಗೆ ಸಮೀಕ್ಷೆ ಐಡಿಯನ್ನು ಗಣತಿದಾರರು ನಮೂದಿಸಲಿದ್ದಾರೆ. ಇದೇ ಐಡಿಯಲ್ಲಿಯೇ ನಿಮ್ಮ ಮನೆ ಸದಸ್ಯರ ಸಂಪೂರ್ಣ ಮಾಹಿಡಿ ಆ್ಯಪ್‌ಗೆ ಅಪ್‌ಲೋಡ್ ಆಗುತ್ತದೆ.
ಗಣತಿದಾರರಿಗೆ ತರಬೇತಿ: ಗಣತಿದಾರರು, ಮೇಲ್ವಿಚಾರಕರು, ಮಾಸ್ಟರ್ ಟ್ರೈನರ್‌ಗಳ ನೇಮಕ ಮಾಡಿಕೊಳ್ಳಲಾಗಿದೆ. ಮಾಸ್ಟರ್ ಟ್ರೈನರ್‌ಗಳಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತದೆ. ಉಳಿದವರಿಗೆ ಅವರು ತರಬೇತಿ ನೀಡಲಿದ್ದಾರೆ. ಇಂತಿಷ್ಟು ಮನೆಗೆ ಒಬ್ಬರು ಗಣತಿದಾರರನ್ನು ನೇಮಕ ಮಾಡಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಜಿಲ್ಲೆಯ ಬಹುತೇಕ ಕುಟುಂಬಗಳು ವಿದ್ಯುತ್ ಸಂಪರ್ಕ ಹೊಂದಿವೆ. ಒಂದೇ ಮೀಟರ್‌ನಡಿ ಹೆಚ್ಚಿನ ಮನೆಗಳಿದ್ದರೂ ಪ್ರತ್ಯೇಕವಾಗಿಯೇ ಸಮೀಕ್ಷೆ ಮಾಡಲಾಗುತ್ತದೆ. ಎಲ್ಲರನ್ನೂ ಗಣತಿ ಒಳಗೊಳ್ಳಲಿದೆ ಎಂದರು.
ಜನರಿಗೆ ಬೇಕಿದೆ ಜಾಗೃತಿ
ಬಾಗಲಕೋಟೆ: ಸಮೀಕ್ಷೆ ಕಾರ್ಯ ಆರಂಭವಾಗಲಿದ್ದು ಸಮೀಕ್ಷೆ ವೇಳೆ ನೀಡಬೇಕಾದ ಮಾಹಿತಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಈ ಹಿಂದೆ ಸಮೀಕ್ಷೆ ನಡೆಸಿದಾಗ ಕೆಲವು ಜನರು ನಮ್ಮ ಮನೆಗಳಿಗೆ ಸಮೀಕ್ಷೆಗೆ ಅಧಿಕಾರಿಗಳು ಬಂದೇ ಇಲ್ಲ ಎಂದು ದೂರಿದ್ದರು. ಮಾಹಿತಿಯನ್ನೂ ಸರಿಯಾಗಿ ದಾಖಲಿಸಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಇತ್ತೀಚೆಗೆ ಒಳ ಮೀಸಲಾತಿ ಸಮೀಕ್ಷೆ ವೇಳೆಯೂ ದೂರುಗಳು ಕೇಳಿ ಬಂದಿವೆ. ಗ್ರಾಮೀಣ ಪ್ರದೇಶದಲ್ಲಿ ಅನಕ್ಷರಸ್ಥರಿದ್ದಾರೆ. ನಗರ ಪ್ರದೇಶದಲ್ಲಿ ಪತಿ ಪತ್ನಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಅಂತಹ ಮನೆಗಳ ಗಣತಿಗೆ ಯಾವಾಗ ಬರಲಾಗುತ್ತದೆ. ಏನು ಮಾಹಿತಿ ಇರಬೇಕು ಎಂಬ ಬಗ್ಗೆ ತಿಳಿವಳಿಕೆ ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.