
ಬಾದಾಮಿ ಹೊರವಲಯದ ಕುಳಗೇರಿ ರಸ್ತೆಯ ಪಕ್ಕದಲ್ಲಿ ಅನಾಥವಾಗಿರುವ ಶಿಲೆಯಲ್ಲಿ ರೂಪಿಸಿದ ಎರಡು ಪುಲಿಕೇಶಿ, ಒಂದು ಬಸವೇಶ್ವರ ಮೂರ್ತಿಗಳು.
ಬಾದಾಮಿ: ಪಟ್ಟಣದ ವೀರಪುಲಿಕೇಶಿ ವೃತ್ತದ ರಸ್ತೆಯ ಪಕ್ಕದಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ₹1.50 ಕೋಟಿ ವೆಚ್ಚದಲ್ಲಿ ನೂತನ ಇಮ್ಮಡಿ ಪುಲಿಕೇಶಿ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಈಚೆಗೆ ಚಾಲುಕ್ಯ ಉತ್ಸವಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದರು.
ಆದರೆ ಬಾದಾಮಿ ಹೊರವಲಯದ ಕುಳಗೇರಿಗೆ ಹೋಗುವ ರಸ್ತೆ ಎಡಕ್ಕೆ ಪುಲಿಕೇಶಿ ಮತ್ತು ಬಸವೇಶ್ವರ ಮೂರ್ತಿಗಳು ಕುಳಿತ ಭಂಗಿಯಲ್ಲಿವೆ. ಮತ್ತೊಂದು ಪುಲಿಕೇಶಿ ಮೂರ್ತಿ ಮರಳಿನಲ್ಲಿ ಮಲಗಿದ ಸ್ಥಿತಿಯಲ್ಲಿದ್ದು ಆಕಾಶವನ್ನು ನೋಡುವಂತಿದೆ. ಮೂರು ವರ್ಷಗಳಿಂದ ಇಲ್ಲಿಯೇ ಅನಾಥವಾಗಿವೆ.
‘ನಮ್ಮನ್ನು ಯಾರು ಎಲ್ಲಿ ಪ್ರತಿಷ್ಠಾಪನೆ ಮಾಡುವರು ಎಂದು ಶಿಲಾ ಮೂರ್ತಿಗಳು ದಾರಿಕಾಯುತ್ತಿವೆ’. ಇನ್ನೂ ಈ ಮೂರ್ತಿಗಳಿಗೆ ಪ್ರತಿಷ್ಠಾಪನೆ ಭಾಗ್ಯವು ಬಂದಂತಿಲ್ಲ ಎಂದು ಸಾರ್ವಜನಿಕರು ಚರ್ಚೆಯಲ್ಲಿ ತೊಡಗಿದ್ದಾರೆ.
ಕೇಂದ್ರ ಸರ್ಕಾರದ ಪಾರಂಪರಿಕ ಹೃದಯ ಯೋಜನೆಯಲ್ಲಿ ಚಾಲುಕ್ಯರ ರಾಜಧಾನಿ ಬಾದಾಮಿ ಪಟ್ಟಣದಲ್ಲಿ ಪಾರಂಪರಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಒಡಿಶಾ ರಾಜ್ಯದ ಕಲಾವಿದರು 15 ಅಡಿ ಎತ್ತರದ ಶಿಲೆಯಲ್ಲಿ ಮೂರ್ತಿ ರಚಿಸಿ ಮೂರು ವರ್ಷವಾದರೂ ಯಾರೂ ಕೇಳದಂತಾಗಿದೆ.
ಕೇಂದ್ರ ಲೋಕೋಪಯೋಗಿ ಇಲಾಖೆ ವೀರಪುಲಿಕೇಶಿ ವೃತ್ತದಲ್ಲಿ ಪ್ರತಿಷ್ಠಾಪಿಸಲು ಸಿಸಿ ಕಂಬವನ್ನು ತಯಾರಿಸಿತ್ತು. ಇಲ್ಲಿನ ಸಿಸಿ ಕಂಬಕ್ಕೆ ನಿಧನರಾದವರ ಶ್ರದ್ಧಾಂಜಲಿ ಫ್ಲೆಕ್ಸುಗಳನ್ನು ಹಾಕಲಾಗುತ್ತಿದೆ. ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮೂರ್ತಿಯನ್ನು ಸ್ಥಾಪಿಸಲು ರಸ್ತೆಯನ್ನು ಅಗೆದು ಮುಚ್ಚಲಾಯಿತು.
ಪಾರಂಪರಿಕ ಶಿಲಾ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಮಂಡ್ಯದ ಕದಂಬಸೇನೆ ಮುಖ್ಯಮಂತ್ರಿಯಿಂದ ಜಿಲ್ಲಾ ಮತ್ತು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಯಾರೂ ಈ ಮೂರ್ತಿಗಳ ಬಗ್ಗೆ ಯೋಚಿಸಿದಂತೆ ಕಾಣುತ್ತಿಲ್ಲ.
‘ಪುಲಿಕೇಶಿ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡುವ ಮೂರ್ತಿ ಲೋಹದ ಮೂರ್ತಿ ಎಂದು ತಿಳಿದಿದೆ. ಇದಕ್ಕೆ ನಮ್ಮ ವಿರೋಧವಿಲ್ಲ ಸ್ವಾಗತವಿದೆ. ಆದರೆ ಶಿಲಾ ಮೂರ್ತಿ ಪ್ರತಿಷ್ಠಾಪನೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿ ಆಗ್ರಹಿಸಿದರೂ ಸೂಕ್ತ ಕ್ರಮವನ್ನು ಕೈಗೊಂಡಿಲ್ಲ. ಮುಂಬರುವ ದಿನಗಳಲ್ಲಿ ಹೋರಾಟ ಮಾಡುವುದಾಗಿ ’ ನಗರ ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಣ್ಣ ಹಿರೇಹಾಳ ಪ್ರತಿಕ್ರಿಯಿಸಿದರು.
ಕೇಂದ್ರ ಲೋಕೋಪಯೋಗಿ ಇಲಾಖೆಯು ಸ್ಥಳೀಯ ಪುರಸಭೆ ಸಹಕಾರದಿಂದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕಿತ್ತು. ಮೂರ್ತಿ ಪ್ರತಿಷ್ಠಾಪನೆಗೆ ಪುರಸಭೆ ಸ್ಥಳ ಆಯ್ಕೆ ಮಾಡದ್ದರಿಂದ ನನೆಗುದಿಗೆ ಬಿದ್ದಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
‘ ಕೇಂದ್ರ ಸರ್ಕಾರದ ಅನುದಾನದ ಯೋಜನೆಯಲ್ಲಿ ರೂಪಿಸಲಾದ ಮೂರ್ತಿಗಳ ಪ್ರತಿಷ್ಠಾಪನೆಗೆ ಜಿಲ್ಲೆಯ ಅಧಿಕಾರಿಗಳ, ಜನಪ್ರತಿನಿಧಿಗಳ ಸಹಕಾರದ ಕೊರತೆ ಮತ್ತು ಸ್ಥಳೀಯ ಆಡಳಿತ ಮಂಡಳಿಯ ನಿರ್ಲಕ್ಷ್ಯದ ದ್ಯೋತಕವಾಗಿದೆ ’ ಎಂದು ಸಂಸದ ಪಿ.ಸಿ. ಗದ್ದಿಗೌಡರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಬವವೇಶ್ವರ ಮೂರ್ತಿಯನ್ನು ರೈಲ್ವೆ ಸ್ಟೇಶನ್ ರಸ್ತೆಯ ಬಸವೇಶ್ವರ ವೃತ್ತದ ಪಕ್ಕದ ರಸ್ತೆಯಲ್ಲಿ ಹಾಗೂ ಪುಲಿಕೇಶಿ ಮೂರ್ತಿಗಳನ್ನು ಸೂಕ್ತ ಜಾಗ ಆಯ್ಕೆಮಾಡಿ ಬೇಗ ಪ್ರತಿಷ್ಠಾಪಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.