ಬೀಳಗಿ: ಸಕಾಲಕ್ಕೆ ಸಾರಿಗೆ ಇಲಾಖೆ ಬಸ್ ಬಾರದ ಕಾರಣ ಪ್ರಯಾಣಿಕರಿಗೆ ನಿತ್ಯ ತೊಂದರೆಯಾಗುತ್ತಿದೆ.
ತಾಲ್ಲೂಕಿನ ಸುನಗ ಲಮಾಣಿ ತಾಂಡ ನಂ.1ದಲ್ಲಿ ಸತತ ನಾಲ್ಕು ದಿನಗಳಿಂದ ಬಸ್ ಸಕಾಲಕ್ಕೆ ಬಾರದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಈಚೆಗೆ ಪ್ರತಿಭಟನೆ ನಡೆಸಿದರು.
ಪ್ರತಿದಿನ ಬೆಳಿಗ್ಗೆ ಚಿಕ್ಕಾಲಗುಂಡಿ, ಅರಕೇರಿ ಗ್ರಾಮಗಳಿಂದ ಬರುವ ಬಸ್ ಸಂಪೂರ್ಣ ಭರ್ತಿಯಾಗಿ ಬರುತ್ತಿರುವುದರಿಂದ ಸುನಗ ತಾಂಡಾದ ವಿದ್ಯಾರ್ಥಿಗಳು ಬಸ್ಸಿನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಕಾರ್ಮಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಸುನಗ ಎಲ್‌ಟಿ ಗ್ರಾಮದಿಂದ ದಿನ 150 ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ನೊಂದ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಕಾಲಕ್ಕೆ ಬಸ್ ಸಂಚಾರ ಆರಂಭಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಸಾರಿಗೆ ಸಂಸ್ಥೆ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಇಲ್ಲಿನ ಜನ ಎಚ್ಚರಿಕೆ ನೀಡಿದರು.
ಬೇಡಿಕೆ: ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿಬರಲು ಮುಂಜಾನೆ 8:30 ಗಂಟೆಗೆ ಸುನಗ ತಾಂಡಾ-1ರಿಂದ ಬೀಳಗಿಗೆ ಹೋಗಬೇಕು. ಮಧ್ಯಾಹ್ನ 4:15 ಕ್ಕೆ ಬೀಳಗಿ ಬಿಟ್ಟು ಸುನಗ ತಾಂಡಾ-1ಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗ್ರಾಪಂ ಸದಸ್ಯರಾದ ಶಂಕರ ಜಾಧವ, ಆನಂದ ರಾಠೋಡ, ಶಿವಪ್ಪ ತಾಂಡಾ-1 ಸುಧೀಪ ಲಮಾಣಿ, ಆಕಾಶ ರಾಠೋಡ, ಶ್ರೀಕಾಂತ ಲಮಾಣಿ, ರೂಪಾ ಲಮಾಣಿ, ನೀಲಾ ಲಮಾಣಿ, ಸಂಜನಾ ಲಮಾಣಿ, ರೋಹಿತ ರಾಠೋಡ, ರಾಹುಲ ರಾಠೋಡ ಮತ್ತಿತರಿದ್ದರು.
ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿತ್ಯ ಬೆಳಿಗ್ಗೆ 8.30ಕ್ಕೆ ಸುನಗ ಎಲ್‌ಟಿ ಗ್ರಾಮದಿಂದ ಬಸ್ ಸಂಚಾರ ವ್ಯವಸ್ಥೆ ಮಾಡುತ್ತೇವೆ
- ಐ.ಎಸ್.ನಾಯ್ಕರ ಘಟಕ ವ್ಯವಸ್ಥಾಪಕ ಬೀಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.