ADVERTISEMENT

ಗುಳೇದಗುಡ್ಡ | ಕುಮಾರಸ್ವಾಮಿ ವಿರುದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 14:38 IST
Last Updated 1 ಅಕ್ಟೋಬರ್ 2024, 14:38 IST
ಗುಳೇದಗುಡ್ಡದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅವಾಚ್ಯ, ಅಸಭ್ಯವಾಗಿ ನಿಂದಿಸಿದ ಎಂ.ಚಂದ್ರಶೇಖರ ಅವರ ಮೇಲೆ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು
ಗುಳೇದಗುಡ್ಡದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅವಾಚ್ಯ, ಅಸಭ್ಯವಾಗಿ ನಿಂದಿಸಿದ ಎಂ.ಚಂದ್ರಶೇಖರ ಅವರ ಮೇಲೆ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು   

ಗುಳೇದಗುಡ್ಡ: ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎ.ಡಿ.ಜೆ.ಪಿ. ಎಂ.ಚಂದ್ರಶೇಖರ ಅವರು ಮಾಜಿ ಸಿಎಂ, ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಭ್ಯ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಖಂಡಿಸಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟಿಸಿದರು.

 ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಂ.ಚಂದ್ರಶೇಖರ ಅವರು, ಹಲವಾರು ಭೂಗಳ್ಳರು, ವ್ಯಾಪಾರಸ್ಥರು, ಉದ್ಯಮಿಗಳು, ಸಮಾಜಘಾತಕರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದಾರೆ. ಅಲ್ಲದೇ ಅವರೊಂದಿಗೆ ಶಾಮಿಲಾಗಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸರಣಿ ಅಪರಾಧಗಳನ್ನು ಎಸಗಿರುವ ಅವರು ಭ್ರಷ್ಟ ಅಧಿಕಾರಿಯಾಗಿದ್ದಾರೆ. ಇಂತಹ ಕ್ರಿಮಿನಲ್ ಅಧಿಕಾರಿಯನ್ನು ಸರ್ಕಾರ ಕೂಡಲೇ ಅಮಾನತು ಮಾಡಬೇಕೆಂದು ಮುಖಂಡರು ಆಗ್ರಹಿಸಿದರು.

ADVERTISEMENT

ಜೆಡಿಎಸ್ ಮುಖಂಡ ಚಂದ್ರಕಾಂತ ಶೇಖಾ ಮಾತನಾಡಿ, ಲೋಕಾಯುಕ್ತ ತನಿಖಾ ದಳದ ಮುಖ್ಯಸ್ಥ ಎಂ.ಚಂದ್ರಶೇಖರ ಅವರು ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಪಾತ್ರ ವಹಿಸಿ ಇಲಾಖೆಯ ಗಾಂಭೀರ್ಯತೆಯನ್ನು ಕಳೆದಿದ್ದಾರೆ. ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಬೆಳೆಯಲು ಇವರು ಮುಖ್ಯ ಕಾರಣರಾಗಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯ ಮೇಲೆ ಸರ್ಕಾರ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ಪಿಕೆಪಿಎಸ್ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ಬಾಲು ಹುನಗುಂಡಿ, ಈರಣ್ಣ ಕವಡಿಮಟ್ಟಿ, ಸಂತೋಷ ನಾಯನೇಗಲಿ, ಕೃಷ್ಣಾ ಹಾಸಿಲಕರ ,ಕೇಮಣ್ಣ ರಾಂಪೂರ, ಸಂಗಮೇಶ ನನ್ನಾ, ಸಂಗಮೇಶ ಮಾವಿನಮರದ, ಮಹಾಂತೇಶ ಜಿರಲಿ, ಪ್ರಶಾಂತ ಅಮರನ್ನವರ, ಸೋಮು ಕಲಬುರ್ಗಿ, ಪ್ರಕಾಶ ವಾಳದುಂಕಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.