ಬಾಗಲಕೋಟೆ: ‘ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸಂಸದ ಪಿ.ಸಿ. ಗದ್ದಿಗೌಡರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶುಕ್ರವಾರ ಜರುಗಿದ ಮೂರನೇ ತ್ರೈಮಾಸಿಕ ದಿಶಾ ಪ್ರಗತಿ ಪರಶೀಲನಾ ಸಭೆ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ‘ಶಿರೂರ ಕ್ರಾಸ್‍ನಿಂದ ಗದ್ದನಕೇರಿ ಕ್ರಾಸ್‍ವರೆಗಿನ 24 ಕಿ.ಮೀ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿ ಎರಡು ವರ್ಷಗಳಾದರೂ ಇನ್ನು ಪೂರ್ಣಗೊಂಡಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದ್ದರೆ ಏಕೆ ನನ್ನ ಗಮನಕ್ಕೆ ತಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪಟ್ಟದಕಲ್ಲಿನಿಂದ ಶಿರೂರವರೆಗಿನ 26 ಕಿ.ಮೀ ದ್ವಿಪಥ ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ನೀಡಿದ್ದರಿಂದ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಕೂಡಲೇ ಕಾಮಗಾರಿ ಆರಂಭಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.
ಬಾಗಲಕೋಟೆ ಬಳಿ, ಬಾದಾಮಿ ಬಳಿ ರೈಲ್ವೆ ಮೇಲು ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಪಿ.ಸಿ. ಗದ್ದಿಗೌಡರ, ‘ರಾಜ್ಯ ಸರ್ಕಾರ ಭೂಮಿ ನೀಡದಿದ್ದರೂ, ಜನರು ನನ್ನನ್ನೇ ಪ್ರಶ್ನಿಸುತ್ತಾರೆ. ಭೂಸ್ವಾಧೀನ ಪ್ರಕ್ರಿಯೆ ತೀವ್ರಗೊಳಿಸಬೇಕು’ ಎಂದು ಉಪವಿಭಾಗಾಧಿಕಾರಿಗೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ‘ಬಾಗಲಕೋಟೆ ಬಳಿ ರೈಲ್ವೆ ಮೇಲು ಸೇತುವೆ ಪೂರ್ಣಗೊಳಿಸದಿರಿಂದ ಜನರಿಗೆ ತೊಂದರೆಯಾಗುತ್ತದೆ. ಪ್ರತಿ ಬಾರಿ ಹದಿನೈದು, ಇಪ್ಪತ್ತು ನಿಮಿಷ ನಿಲ್ಲಬೇಕಾಗಿದೆ. ಬಾಗಲಕೋಟೆ–ಕುಡಚಿ ಮಾರ್ಗವನ್ನೂ ತೀವ್ರವಾಗಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.
‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳು ಜಾರಿಗೆ ತರಲಾಗಿದ್ದು, ಅವುಗಳನ್ನು ಮಹಿಳೆಯರಿಗೆ ಹಾಗು ಮಕ್ಕಳಿಗೆ ತಲುಪಿಸುವ ಕಾರ್ಯವಾಗಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಜನರಿಗೆ ಶೇ90 ರಷ್ಟು ಸಹಾಯಧನದಲ್ಲಿ ನೀಡುವ ಕೃಷಿ ಪರಿಕರಗಳು ಸಮರ್ಪಕ ವಿತರಣೆಗೆ ಕ್ರಮವಹಿಸಬೇಕು ಎಂದು ಸಂಸದ ಗದ್ದಿಗೌಡರ ತಿಳಿಸಿದರು.
ಸಂಸದ ಗದ್ದಿಗೌಡರ ಮಾತನಾಡಿ, ‘ಜಲಜೀವನ್ ಮಿಷನ್ ಯೋಜನೆಯಡಿ ನಳಗಳಿಗೆ ಸಂಪರ್ಕ ಕಲ್ಪಿಸುವುದು, ಸರಿಯಾಗಿ ನೀರು ಸರಬರಾಜು ಮಾಡುವ ಕೆಲಸ ಆಗಬೇಕು. ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಾಕಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಗುಣಮಟ್ಟ ಕಾಪಾಡಿಕೊಳ್ಳಬೇಕು’ ಎಂದು ಸೂಚಿಸಿದರು.
ಪಿಎಂ ಆದರ್ಶ ಗ್ರಾಮ ಯೋಜನೆಯಡಿ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೇ95 ರಷ್ಟು ಪ್ರಗತಿ ಸಾಧಿಸಲಾಗಿದೆ. ಅಲ್ಪಸಂಖ್ಯಾತರ ಪಿಎಂಜೆವಿಕೆ ಯೋಜನೆಯಡಿ 6 ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಪುನಿತ್ ಆರ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಉಪಸ್ಥಿತರಿದ್ದರು.
ಮಂದಗತಿಯಲ್ಲಿ ಭೂಸ್ವಾಧೀನ ಕಾರ್ಯ ರೈಲ್ವೆ ಮಾರ್ಗ ನಿರ್ಮಾಣ ಚುರುಕುಗೊಳಿಸಿ ಯೋಜನೆ ಜನರಿಗೆ ತಲುಪಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.