ADVERTISEMENT

ಕೆರೂರ: ನೂತನ ಕಟ್ಟಡಕ್ಕೆ ಶಾಲೆ ಸ್ಥಳಾಂತರ ಯಾವಾಗ?

ಕಾಡುತ್ತಿರುವ ಮೂಲ ಸೌಕರ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 16:02 IST
Last Updated 1 ಜೂನ್ 2023, 16:02 IST
ನೂತನ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಚಿತ್ರ
ನೂತನ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಚಿತ್ರ   

ಕೆರೂರ: ಇಲ್ಲಿಯ ನೂತನ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಉದ್ಘಾಟನೆಯಾದರೂ ಮಕ್ಕಳಿಗೆ ಈ ಕಟ್ಟಡದಲ್ಲಿ ಕಲಿಯುವ ಭಾಗ್ಯ ಇನ್ನೂ ದೊರಕಿಲ್ಲ.

ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಬಾದಾಮಿಯ ಹಿಂದಿನ ಶಾಸಕ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆರೂರ ಪಟ್ಟಣಕ್ಕೆ ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡಿ ಭೂಮಿಪೂಜೆ ನೇರವೇರಿಸಿದ್ದರು.

ಪಟ್ಟಣದ ಹುಲಮನಿ ಕೈಗಾರಿಕೆ ಪ್ರದೇಶದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 48 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರೌಢಶಾಲೆಯ ಮೂರು ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ. ಸಿದ್ದರಾಮಯ್ಯ ಅವರೇ ಇದನ್ನು ಉದ್ಘಾಟಟಿಸಿದರೂ ಮೂಲ ಸೌಕರ್ಯ, ಕ್ರೀಡಾಂಗಣ ಹಾಗೂ ಬಿಸಿ ಊಟದ ಕೊಠಡಿಯ ಕೊರತೆಯಿಂದ ಶಾಲೆ ಇನ್ನೂ ಪ್ರಾರಂಭವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

ನೂತನ ಶಾಲೆಗೆ ಹೆಚ್ಚುವರಿಯಾಗಿ ಎರಡು ಕೊಠಡಿಗಳಿಗೆ ಅನುದಾನ ದೊರತಿದ್ದು ಅದರ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಮಕ್ಕಳಿಗೆ ನೂತನ ಶಾಲಾ ಕಟ್ಟಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಕಾಂಪೌಂಡ ಇಲ್ಲ. ಶಾಲೆಯ ಪಕ್ಕದಲ್ಲಿ ಸ್ಮಶಾನವಿರುವುದೂ ಪಾಲಕರಿಗೆ ಆತಂಕ ಮೂಡಿಸಿದೆ.

ಈ ಪ್ರದೇಶದಲ್ಲಿ ಸಂಜೆಯಾದರೆ ಮದ್ಯವ್ಯಸನಿಗಳ ಕಾಟ ಹೆಚ್ಚುತ್ತದೆ. ಶಾಲೆಯಲ್ಲಿ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಹೆಚ್ಚುವರಿ ಕೊಠಡಿ ಟೆಂಡರ್‌ ಆಗಿದ್ದು ಕಾಮಗಾರಿ ಪೂರ್ಣಗೊಂಡ ಕೂಡಲೇ ಶೀಘ್ರ ಶಾಲೆಯನ್ನು ಸ್ಥಳಾಂತರ ಮಾಡಲಾಗುವುದು.

-ಆರೀಫ್ ಬಿರಾದರ ಕ್ಷೇತ್ರ ಶಿಕ್ಷಣಾಧಿಕಾರಿ ಬಾದಾಮಿ

ಮಕ್ಕಳಿಗೆ ಸರಿಯಾಗಿ ಮೂಲ ಸೌಕರ್ಯ ಇಲ್ಲದ ಕಾರಣ ಶಾಲೆ ಇನ್ನೂ ಸ್ಥಳಾಂತಗೊಂಡಿಲ್ಲ. ಅನುದಾನಕ್ಕಾಗಿ ಶಾಸಕರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ

-ಜೆ.ಆರ್. ಹಂಜಗಿ ಶಾಲಾ ಮುಖ್ಯ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.