ರಬಕವಿ ಬನಹಟ್ಟಿ: ನ.2ರಂದು ಇಲ್ಲಿನ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಸಮಸ್ತ ಸೋಮವಾರ ಪೇಟೆ ದೈವ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, 42 ಉಪ ಜಾತಿಗಳನ್ನು ಒಳಗೊಂಡ ಸೋಮವಾರ ಪೇಟೆಯ ದೈವ ಮಂಡಳಿ ಮತ್ತು ಮಲ್ಲಿಕಾರ್ಜುನ ದೇವರ ಭಕ್ತ ಮಂಡಳಿ ಆಶ್ರಯದಲ್ಲಿ ಜಾತ್ರೆ ನಡೆಯಲಿದೆ.
ನ.2 ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಶನಿವಾರ ಬೆಳಗಿನ ಜಾವದಿಂದಲೇ ಬಹಳಷ್ಟು ಜನರು ದೀರ್ಘ ದಂಡ ನಮಸ್ಕಾರ ಹಾಕಿ ಹರಕೆಯನ್ನು ಪೂರೈಸುತ್ತಾರೆ. ಸಂಜೆ 8 ಕ್ಕೆ ಹೂ ಮಾಲೆ, ವಿದ್ಯುತ್ ದೀಪಾಲಂಕಾರ ಮತ್ತು ಭಕ್ತರು ನೀಡಿದ ಸಂಕಷ್ಟ ಮಾಲೆಗಳಿಂದ ಶೃಂಗಾರಗೊಂಡ ಮಲ್ಲಿಕಾರ್ಜುನ ದೇವರ ರಥೋತ್ಸವವು ಮಲ್ಲಿಕಾರ್ಜುನ ದೇವಸ್ಥಾನದಿಂದ ಆರಂಭಗೊಂಡ ನಗರದ ಪ್ರಮುಖ ಸಂಚರಿಸಿ ಜುಂಜಪ್ಪನವರ ಮನೆಯವರಿಗೆ ನಡೆಯುತ್ತದೆ.
ರಥೋತ್ಸವದ ನಂತರ ಇಲ್ಲಿನ ಹಳೆಯ ಅಂಚೆ ಕಚೇರಿಯ ಮುಂಭಾಗದಲ್ಲಿ ರಬಕವಿ ಮತ್ತು ಮಹಾಲಿಂಗಪುರದ ಸಂಬಾಳ ಮತ್ತು ಕರಡಿ ಕಲಾವಿದರ ತಂಡದಿಂದ ಸಂಬಾಳ ಮತ್ತು ಕರಡಿ ವಾದನಗಳ ಪ್ರದರ್ಶನ ನಡೆಯಲಿದೆ.
ಭಾನುವಾರ ಮಧ್ಯಾಹ್ನ 3ಗಂಟೆಗೆ ಇಲ್ಲಿನ ಅಶೋಕ ಕಾಲೊನಿಯಲ್ಲಿರುವ ಕುಸ್ತಿ ಮೈದಾನದಲ್ಲಿ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ.
ಸೋಮವಾರ ಕಳಸೋತ್ಸವದೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.
ಪ್ರಶಾಂತ ಕೊಳಕಿ, ಡಾ. ಮಲ್ಲಿಕಾರ್ಜುನ ಬಾವಲತ್ತಿ, ಕಿರಣ ಆಳಗಿ, ಮಲ್ಲಿನಾಥ ಕಕಮರಿ, ಶಿವು ಬಾಗೇವಾಡಿ, ಚನ್ನಪ್ಪ ಗುಣಕಿ, ಮಹಾಶಾಂತ ಶೆಟ್ಟಿ, ರಾಜು ಲುಕ್ಕ, ಮಲ್ಲು ಬುಟ್ಟನ್ನವರ, ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.