ADVERTISEMENT

ಗುಳೇ ಹೋಗಿ ಬಂದವರ ಮೇಲೆ ನಿಗಾ!

ಕಾಸರಗೋಡಿನಿಂದ ಮರಳಿದ 87 ಮಂದಿಗ ಕಾರ್ಮಿಕರಿಗೆ ಕ್ವಾರಂಟೈನ್

ವೆಂಕಟೇಶ ಜಿ.ಎಚ್.
Published 29 ಮಾರ್ಚ್ 2020, 14:57 IST
Last Updated 29 ಮಾರ್ಚ್ 2020, 14:57 IST
ಹೊರ ರಾಜ್ಯಗಳಿಗೆ ದುಡಿಯಲು ಹೋಗಿ ಮರಳಿರುವ ಬಾಗಲಕೋಟೆ ಜಿಲ್ಲೆಯ ಕಾರ್ಮಿಕರನ್ನು ಜಿಲ್ಲಾಡಳಿತ ಕ್ವಾರಂಟೈನ್‌ಗೆ ಒಳಪಡಿಸಿದೆ. ಭಾನುವಾರ ಅವರಿಗೆ ಊಟ ನೀಡಲಾಯಿತು
ಹೊರ ರಾಜ್ಯಗಳಿಗೆ ದುಡಿಯಲು ಹೋಗಿ ಮರಳಿರುವ ಬಾಗಲಕೋಟೆ ಜಿಲ್ಲೆಯ ಕಾರ್ಮಿಕರನ್ನು ಜಿಲ್ಲಾಡಳಿತ ಕ್ವಾರಂಟೈನ್‌ಗೆ ಒಳಪಡಿಸಿದೆ. ಭಾನುವಾರ ಅವರಿಗೆ ಊಟ ನೀಡಲಾಯಿತು   

ಬಾಗಲಕೋಟೆ: ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಕೇರಳದ ಕಾಸರಗೋಡು ಜಿಲ್ಲೆ ಹಾಗೂ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಜಿಲ್ಲೆಗೆ ಮರಳುತ್ತಿದ್ದಾರೆ. ಇದು ಸ್ಥಳೀಯವಾಗಿ ಆತಂಕ ಸೃಷ್ಟಿಸಿದ್ದು, ಜಿಲ್ಲಾಡಳಿತದ ನಿದ್ರೆಗೆಡಿಸಿದೆ.

ಅನ್ನ ಅರಸಿ ಜಿಲ್ಲೆಯ ಗ್ರಾಮೀಣರು ಪಕ್ಕದ ಕೇರಳ, ಗೋವಾ, ಮಹಾರಾಷ್ಟ್ರ ರಾಜ್ಯಗಳು ಹಾಗೂ ಬೆಂಗಳೂರು, ಮಂಗಳೂರು, ಉಡುಪಿಗೆ ತೆರಳುವುದು ವಾಡಿಕೆ. ದೇಶಾದ್ಯಂತ ಲಾಕ್‌ಡೌನ್ ಪರಿಣಾಮ ಹೀಗೆ ಗುಳೇ ಹೋದವರು ಕೆಲಸವಿಲ್ಲದೇ ಊರಿಗೆ ಮರಳುತ್ತಿದ್ದಾರೆ. ಇದು ದುಗುಡಕ್ಕೆ ಕಾರಣವಾಗಿದೆ.

ಕ್ವಾರಂಟೈನ್‌ಗೆ ವ್ಯವಸ್ಥೆ:ಊರಿಗೆ ಮರಳಿದವರಲ್ಲಿ ಬಾದಾಮಿ ಹಾಗೂ ಹುನಗುಂದ ತಾಲ್ಲೂಕುಗಳಿಂದ ಗುಳೇ ಹೋದವರು ಹೆಚ್ಚಿನವರು ಇದ್ದಾರೆ. ಊರಿಗೆ ಮರಳಿದರೆ ಕೊರೊನಾ ವೈರಸ್ ಹರಡುವಿಕೆ ಭೀತಿಯಿಂದ ಊರಿನವರೇ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಮುಳ್ಳು–ಬೇಲಿ ಹಾಕಿ ಗ್ರಾಮಗಳನ್ನು ಸ್ವಯಂ ದಿಗ್ಬಂಧನ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ನೆರವಿಗೆ ಜಿಲ್ಲಾ ಪಂಚಾಯ್ತಿ ಆಡಳಿತ ಧಾವಿಸಿದೆ.

ADVERTISEMENT

ಕಾಸರಗೋಡಿನಿಂದ ಶನಿವಾರ ಜಿಲ್ಲೆಗೆ ಬಂದ 87 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.ಹುನಗುಂದದಲ್ಲಿ ಪರಿಶಿಷ್ಟ ಜಾತಿಯಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 28 ಮಂದಿ ಹಾಗೂ ಅಲ್ಲಿನ ಆದರ್ಶ ವಿದ್ಯಾಲಯದಲ್ಲಿ 14 ಜನರು ನಿಗಾಗೆ ಒಳಪಟ್ಟಿದ್ದಾರೆ. ಗುಳೇದಗುಡ್ಡ ಸಮೀಪದ ಆಸಂಗಿಯ ಆಶಾದೀಪ ಶಾಲೆಯಲ್ಲಿ 22 ಮಂದಿ, ಬಾದಾಮಿ ತಾಲ್ಲೂಕಿನ ಜಾಲಿಹಾಳದಲ್ಲಿ 23 ಮಂದಿಗೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇಡಲಾಗಿದೆ. ಅವರು ದಿನದ 24 ಗಂಟೆಯೂ ನಿಗಾದಲ್ಲಿ ಇರಲಿದ್ದು, ಎಲ್ಲರಿಗೂ ಅಲ್ಲಿಯೇ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.

ಮಾಹಿತಿ ನೀಡಲು ಮನವಿ:ಕಾಸರಗೋಡು, ಗೋವಾ, ಮಂಗಳೂರಿನಿಂದ ಬಂದವರು ನಿಮ್ಮ ಸಂಬಂಧಿಕರು ಯಾರಾದರೂ ಇದ್ದರೆ ಮಾಹಿತಿ ಕೊಡಿ. ಕ್ವಾರಂಟೈನ್‌ಗೆ ಒಳಪಡಿಸೋಣ ಎಂದು ಆಯಾ ಗ್ರಾಮಗಳ ಕಾರ್ಯಪಡೆಯಿಂದ ಮನವಿ ಮಾಡಲಾಗುತ್ತಿದೆ. ಹುನಗುಂದ ತಾಲ್ಲೂಕಿನ ಕರಡಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಡಂಗುರ ಕೂಡ ಸಾರಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.