
ಬಜೆಟ್ ನಿರೀಕ್ಷೆ
ಬಾಗಲಕೋಟೆ: ವಿಮಾನ ನಿಲ್ದಾಣ ಸ್ಥಾಪಿಸಬೇಕು ಹಾಗೂ ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವ ಕೈಗಾರಿಕೆಗಳ ಆರಂಭಿಸಬೇಕು ಎಂಬ ಜಿಲ್ಲೆಯ ಜನರ ಕನಸು ಕೈಗೂಡಿಲ್ಲ. ಇಂದಿಗೂ ಉದ್ಯೋಗ ಅರಿಸಿ ಜನರು ಮಂಗಳೂರು, ಉಡುಪಿ, ಬೆಂಗಳೂರು, ಮುಂಬೈ, ಪಣಜಿ ಸೇರಿದಂತೆ ವಿವಿಧೆಡೆ ವಲಸೆ ಹೋಗುವುದು ತಪ್ಪಿಲ್ಲ.
ವಿಮಾನ ನಿಲ್ದಾಣ ಸ್ಥಾಪನೆ ಇತ್ತೀಚೆಗೆ ಚರ್ಚೆಯಾಗುವುದೇ ನಿಂತಿದೆ. ಕೈಗಾರಿಕೆಗಳ ಆರಂಭದ ವಿಷಯಗಳು ಆಗಾಗ ಚರ್ಚೆಯಾಗುತ್ತಲೇ ಇರುತ್ತವೆ. ಅಧಿಕಾರದಲ್ಲಿರುವ ಪಕ್ಷ ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿ ವಶಪಡಿಸಿಕೊಳ್ಳಲು ಮುಂದಾದಾಗ, ವಿರೋಧ ಪಕ್ಷದಲ್ಲಿರುವ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಾರೆ. ವಿರೋಧ ಪಕ್ಷದಲ್ಲಿದ್ದವರು ಆಡಳಿತಕ್ಕೆ ಬಂದಾಗ, ಈಗ ವಿರೋಧ ಪಕ್ಷದಲ್ಲಿದ್ದವರು ವಿರೋಧ ಮಾಡುತ್ತಾರೆ. ಪರಿಣಾಮ ಜಿಲ್ಲೆಗೆ ಬೃಹತ್ ಕೈಗಾರಿಕೆ ಆರಂಭದ ಕನಸು ನನಸಾಗಿಲ್ಲ.
ಜಿಲ್ಲೆಯ ಹಲಕುರ್ಕಿಯಲ್ಲಿ ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಆರಂಭಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದ ಮುರುಗೇಶ ನಿರಾಣಿ ಮುಂದಾಗಿದ್ದರು. ಸರ್ಕಾರಕ್ಕೆ ಸೇರಿದ್ದ 400 ಎಕರೆ ಭೂಮಿಯ ಜತೆಗೆ 1,600 ಎಕರೆ ರೈತರ ಭೂಮಿ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ಅದಕ್ಕೆ ರೈತರು, ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡಲಾಯಿತು. ಈಗ ಸರ್ಕಾರಿ ಭೂಮಿಯಲ್ಲಿಯೇ ಕೈಗಾರಿಕೆ ಆರಂಭಿಸುವ ಮಾತುಗಳು ಮತ್ತೇ ಚಾಲನೆ ಪಡೆದುಕೊಂಡಿವೆ.
ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮದಂತಹ ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದಿರುವ ಪ್ರವಾಸಿ ತಾಣಗಳು ಇಲ್ಲಿವೆ. ಇಲ್ಲಿಗೆ ವಿದೇಶ, ಬೇರೆ ರಾಜ್ಯಗಳಿಂದ ವಿಮಾನದಲ್ಲಿ ಬರಬಯಸುವ ಪ್ರವಾಸಿಗರು, ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಜಿಲ್ಲೆಗೆ ಬರಬೇಕು.
ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳಿವೆ. ಸಿಮೆಂಟ್ ಕಾರ್ಖಾನೆಗಳೂ ಇವೆ. ಸ್ಥಳೀಯ ಕೆಲವರಿಗೆ ಉದ್ಯೋಗವೂ ಸೃಷ್ಟಿಯಾಗಿದೆ. ಇಳಕಲ್ ಸುತ್ತಮುತ್ತಲಿನ ಗ್ರಾನೈಟ್ ಉದ್ಯಮ ಮಂಕಾಗಿದೆ. ಅದಕ್ಕೊಂದು ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ. ಹಲವಾರು ಜನರಿಗೆ ಉದ್ಯೋಗವಕಾಶ ಒದಗಿಸಿರುವ ನೇಕಾರಿಕೆಗೆ ಕಾಯಕಲ್ಪ ನೀಡಲು ಜವಳಿ ಪಾರ್ಕ್ ಗಳನ್ನು ಆರಂಭಿಸಬೇಕಿದೆ.
ಗ್ರೀನ್ ಫುಡ್ ಪಾರ್ಕ್ ಆರಂಭಿಸಲಾಗಿತ್ತಾದರೂ, ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವನ್ನೇ ಮಾಡಿಲ್ಲ. ಅದಕ್ಕೆ ನೀಡಲಾಗಿದ್ದ ಭೂಮಿ ಉಳ್ಳವರ ಪಾಲಾಗಿದೆ. ಇನ್ನೊಂದು ಕೈಗಾರಿಕೆ ಪ್ರದೇಶದಲ್ಲಿ ಹೇಳಿಕೊಳ್ಳುವಂತಹ ಕಾರ್ಖಾನೆಗಳು ಕಾರ್ಯಾರಂಭ ಮಾಡಿಲ್ಲ.
ವಿಮಾನ ಸಂಪರ್ಕ, ರೈಲ್ವೆ ಮಾರ್ಗಗಳನ್ನು ಪೂರ್ಣಗೊಳಿಸುವುದು. ಕೈಗಾರಿಕೆಗಳಿಗೆ ಬೇಕಾದ ಭೂಮಿ, ಮೂಲ ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕಿದೆ. ಇಲ್ಲದಿದ್ದರೆ, ಉದ್ಯಮಿಗಳು ಇತ್ತ ಮುಖ ಮಾಡುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.