
ಬಾಗಲಕೋಟೆ: ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ, ಯಾವುದೇ ಲೋಪಗಳಿಲ್ಲದ ಮತದಾರರ ಪಟ್ಟಿ ಸಿದ್ದಪಡಿಸಲು ಕ್ರಮವಹಿಸಬೇಕು ಎಂದು ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪೂರ್ವ ಸಿದ್ದತೆ ಕುರಿತು ಜರುಗಿದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅರ್ಹ ಮತದಾರರ ಪಟ್ಟಿ ಸಿದ್ದಪಡಿಸುವುದು ಬಹಳ ಮಹತ್ವದ್ದಾಗಿದೆ. ಈ ವರೆಗೂ ಶೇ೮೦ ರಷ್ಟು ಮಾತ್ರ ಆಗಿದ್ದು, ಇನ್ನುಳಿದಂತಹ ಮತದಾರರ ಹೆಸರುಗಳನ್ನು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ತಪ್ಪು ಮಾಹಿತಿ ನೀಡುವವರ ವಿರುದ್ದ ಕೂಡ ಕ್ರಮವಾಗುತ್ತದೆ. ಬಿಎಲ್ಒ ಗಳಿಗೆ ಸರಿಯಾದ ತರಬೇತಿ ನೀಡುವ ಕೆಲಸ ಮೊದಲು ಮಾಡಿ. ಸರಿಯಾದ ತರಬೇತಿ ಹೊಂದಿದ್ದರೆ ಲೋಪಗಳಾಗುವುದಿಲ್ಲ. ಎಲ್ಲವೂ ಶಿಸ್ತುಬದ್ದವಾಗಿರಬೇಕು. ಫಾರ್ಂ 6,7 ಮತ್ತು 8 ಅನ್ನು ಪರಿಶೀಲಿಸಿ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿಬೇಕು. ಉಪಚುನಾವಣೆಯ ಅಗತ್ಯ ಪೂರ್ವ ಸಿದ್ದತೆಗಳನ್ನು ಈಗಲೇ ಮಾಡಿಟ್ಟುಕೊಂಡಿರಿ ಎಂದು ಸೂಚಿಸಿದರು.
ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಪ ಚುನಾವಣೆಯಲ್ಲಿಯೂ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ, ಈ ಹಿನ್ನಲೆಯಲ್ಲಿ ಎಲ್ಲಾ ಮಾದರಿ ನೀತಿ ಸಂಹಿತೆ ಪಾಲನಾ ತಂಡಗಳನ್ನು ಮಾಡಿಟ್ಟುಕೊಳ್ಳಿ. ಚುನಾವಣಾ ನೀತಿ ಸಂಹಿತೆ ಜಾರಿಯಾದ ತಕ್ಷಣ ಎಲ್ಲಾ ತಂಡಗಳು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಪೇಡ್ ನ್ಯೂಸ್ ಬಗ್ಗೆ ಗಮನ ನೀಡಬೇಕು. ಕಂಟೆಂಟ್ ನೋಡಿಯೇ ಜಾಹೀರಾತಿಗೆ ಅನುಮತಿ ನೀಡುವ ಕೆಲಸ ಆಗಬೇಕು. ಜಿಪಿಎಸ್ ಇಲ್ಲದ ವಾಹನಗಳಲ್ಲಿ ಮತಯಂತ್ರಗಳನ್ನು ಸಾಗಿಸಬಾರದು. ಚುನಾವಣಾ ಕಾರ್ಯದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ್ ವಾಸುದೇವ ಸ್ವಾಮಿ, ಶಿರಸ್ತೇದಾರ ಮಹೇಶ ಪಾಂಡವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.