ಬಂಧನ
(ಪ್ರಾತಿನಿಧಿಕ ಚಿತ್ರ)
ಬಾಗಲಕೋಟೆ: ಹಿನ್ನೀರಿನಲ್ಲಿ ಮುಳುಗಡೆ ಹೊಂದಿದ್ದ ಮನೆ ಪರಿಹಾರ ಹಣದಲ್ಲಿ ಪಾಲು ನೀಡದ ಪತ್ನಿಯ ತಮ್ಮನನ್ನೇ ಕೊಲೆಗಾರ ಸೇರಿದಂತೆ ಮೂವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ. ವಿಜಯ್ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಅವಧೂತ ಗವಿಮಠ, ಮಿಯಾದಾದ ಮಹಮ್ಮದ್ ನಾಯಕ, ನಚಿಕೇತ ಶಹಾಪೂರ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ತಲಾ ₹5 ಸಾವಿರ ದಂಡ ವಿಧಿಸದಿದ್ದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣ ವಿವರ: ವೀರೇಶ ಹಡಗಳಿಮಠ ನವನಗರದ ಸೆಕ್ಟರ್ ನಂ.63ರಲ್ಲಿ ವಾಸವಾಗಿದ್ದರು. ಇವರ ತಂದೆ–ತಾಯಿ ಹಲವು ವರ್ಷಗಳ ಹಿಂದೆ ಮೃತರಾಗಿದ್ದರು. ವೀರೇಶ ಅವರ ಅಕ್ಕನನ್ನು ಬೆಳಗಾವಿ ಅವಧೂತ ಗವಿಮಠ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.
ಬಾಗಲಕೋಟೆಯಲ್ಲಿದ್ದ ವೀರೇಶ ಅವರ ಪಿತ್ರಾರ್ಜಿತ ಆಸ್ತಿ ಮುಳುಗಡೆಯಾಗಿತ್ತು. ಅದರ ಮೊದಲ ಕಂತಿನ ಪರಿಹಾರ ಹಣ ಬಿಡುಗಡೆಯಾಗಿತ್ತು. ಅದರಲ್ಲಿ ನಮಗೂ ಅರ್ಧ ಪಾಲು ನೀಡಬೇಕು ಎಂದು ವೀರೇಶ ಅವರ ಅಕ್ಕ ಮಧುಶ್ರೀ ಹಾಗೂ ಮಾವ ಅವಧೂತ ಫೋನ್ ಮಾಡಿ ಕಿರಿಕಿರಿ ಮಾಡುತ್ತಿದ್ದರು.
ವೀರೇಶ ತನ್ನ ಸ್ನೇಹಿತ ಸುಹಾಸ ಬೋರನ್ನವರನೊಂದಿಗೆ ನವನಗರದ ಬಾಡಿಗೆ ಮನೆಯಲ್ಲಿದ್ದಾಗ ಕೊಲೆ ಮಾಡುವ ಉದ್ದೇಶದಿಂದ ಅಪರಾಧಿಗಳು ಮನೆ ಹೊಕ್ಕು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದರು. ಬಿಡಿಸಿಕೊಳ್ಳಲು ಹೋದ ಸುಹಾಸ ಅವರ ಮೇಲೆಯೂ ಹಲ್ಲೆ ಮಾಡಲಾಗಿತ್ತು.
ನವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ತನಿಖಾಧಿಕಾರಿ ಸಿಪಿಐ ಎಸ್.ಎಂ. ಅವಜಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.