ADVERTISEMENT

ಜನ ನಿಮ್ಮನ್ನು ಯಾವ ಕಾರಣಕ್ಕೆ ನೆನಪಿಸಿಕೊಳ್ಳಬೇಕು: ಸಿಎಂಗೆ ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 10:42 IST
Last Updated 17 ಏಪ್ರಿಲ್ 2025, 10:42 IST
   

ಬಾಗಲಕೋಟೆ: ‘ಸಿದ್ದರಾಮಯ್ಯ ಅವರೇ ನೀವು ಎಷ್ಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದೀರಿ ಎಂಬುದು ಮುಖ್ಯವಲ್ಲ. ಬಡವರ, ರೈತರ ಕಣ್ಣೀರು ಒರೆಸಿದ್ದೀರಾ? ಅಭಿವೃದ್ಧಿ ಮಾಡಿದ್ದೀರಾ ಎಂಬುದು ಮುಖ್ಯ. ನಿಮ್ಮ ಅಧಿಕಾರ ಹೋದ ಮೇಲೆ ಜನ ನಿಮ್ಮನ್ನು ಯಾವ ಕಾರಣಕ್ಕೆ ನೆನಪಿಸಿಕೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.

ಬಾಗಲಕೋಟೆಯಲ್ಲಿ ಗುರುವಾರ ಬಿಜೆಪಿ ವತಿಯಿಂದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಿರುವುದಕ್ಕಾ?, ಗೋಹತ್ಯೆ ಜಾಸ್ತಿಯಾಗಿರುವುದಕ್ಕಾ? ಲಿಂಗಾಯತ ಪ್ರತ್ಯೇಕ ಧರ್ಮದ ಬೆಂಕಿ ಹಚ್ಚಿದ್ದಕ್ಕೆ ನೆನಪಿಸಿಕೊಳ್ಳಬೇಕೇ’ ಎಂದು ಕೇಳಿದರು.

‘ಗುತ್ತಿಗೆಯಲ್ಲಿ ಶೇ4ರಷ್ಟು ಮುಸ್ಲಿಮರಿಗೆ ಮೀಸಲು ನೀಡಲಾಗಿದೆ. ಅದು ಯಾರಪ್ಪನ ಹಣ? ಮುಸ್ಲಿಮರಿಗಷ್ಟೇ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದೀರಿ’ ಎಂದು ಆರೋಪಿಸಿದರು.

ADVERTISEMENT

‘ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಎರಡು ವರ್ಷಗಳಾದರೂ ಬಿಡಿಗಾಸೂ ಬಿಡುಗಡೆ ಮಾಡಿಲ್ಲ. ವಿವಿಧ ವಸ್ತುಗಳ ಬೆಲೆ ಏರಿಸುವ ಮೂಲಕ ಒಂದು ಕೈಯಲ್ಲಿ ನೀಡಿ, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ಬಡವರ, ರೈತರ ಮರಣ ಶಾಸಕ ಬರೆಯುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನವೆಂಬರ್‌ಗೆ ಟೈಂ ಬಾಂಬ್‌ ಫಿಕ್ಸ್ ಮಾಡಿದ್ದಾರೆ. ಅದು ಸ್ಫೋಟ ಆಗುತ್ತಿದ್ದಂತೆಯೇ ಸರ್ಕಾರ ಪತನವಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಜಾತಿಗಣತಿ ಹೆಸರಿನಲ್ಲಿ ಲಿಂಗಾಯತರನ್ನ, ಒಕ್ಕಲಿಗರನ್ನ, ದಲಿತರನ್ನ ಒಡೆದಿದ್ದೀರಿ. ಮುಸ್ಲಿಮರನ್ನು ರಾಜ್ಯದಲ್ಲಿ ಬಹುಸಂಖ್ಯಾತರನ್ನಾಗಿಸಿದ್ದೀರಿ. ಬಿಜೆಪಿ ಇಲ್ಲದಿದ್ದರೆ, ಪರಿಶಿಷ್ಟ ಜಾರಿಗೆ ಶೇ17ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇ7ರಷ್ಟು ಮೀಸಲಾತಿ ದೊರೆಯುತ್ತಿರಲಿಲ್ಲ ಎಂದು ಟೀಕಿಸಿದರು.

ಲೋಕಸಭಾ ಸದಸ್ಯರಾದ ಪಿ.ಸಿ. ಗದ್ದಿಗೌಡರ, ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ, ವಿಧಾನ ಪರಿಷತ್‌ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್‌. ಪೂಜಾರ, ಎನ್‌. ರವಿಕುಮಾರ್, ಶಾಸಕ ಜಗದೀಶ ಗುಡಗುಂಟಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ವೀರಣ್ಣ ಚರಂತಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.