
ಬಾಗಲಕೋಟೆ: ವಾಣಿಜ್ಯ ಚಟುವಟಿಕೆಗಳಿಗಾಗಿ ನೀಡಿದ ಹಲವು ಸೆಕ್ಟರ್‌ಗಳಲ್ಲಿ ಜಾಲಿ ಗಿಡಗಳು ಬೆಳೆದು ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ಉಂಟಾಗಿದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂಗಡಿಗಳು ನಿರ್ಮಾಣವಾಗದೇ ಸಂಜೆ ಅವು ಅಕ್ರಮ ಚಟುವಟಿಕೆಗಳ ತಾಣಗಳಾಗುತ್ತಿವೆ.
ವಾಣಿಜ್ಯ ಚಟುವಟಿಕೆಗೆ ಸೆಕ್ಟರ್ ನಂ.31ರಲ್ಲಿ ಗುರುವಾರದ ಸಂತೆ ನಡೆಯುತ್ತಿದೆ. ಹಲವಾರು ಜನರು ಅಂಗಡಿಗಳನ್ನು ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಜಾಲಿ ಗಿಡಗಳು ಬೆಳೆದಿರುವುದರಿಂದ ಸಂಚರಿಸಲೂ ಕಷ್ಟ ಪಡಬೇಕಾದ ಸ್ಥಿತಿ ಇದೆ.
ಸೆಕ್ಟರ್ ನಂ.17ರಲ್ಲಿಯೂ ಇದೆ ಸ್ಥಿತಿ. ಮಧ್ಯದಲ್ಲಿ ಹಲವಾರು ನಿವೇಶನಗಳು ಖಾಲಿ ಇದ್ದು, ಅಲ್ಲಿಯೂ ಮುಳ್ಳು ಗಿಡಗಳು ಬೆಳೆದಿವೆ. ಅಲ್ಲಿ ಸಂಚರಿಸಲು ಭಯ ಪಡುವಂತಹ ಸ್ಥಿತಿ ಇದೆ. ವಿಷಜಂತುಗಳ ವಾಸಸ್ಥಾನವಾಗಿವೆ.
ರಸ್ತೆಯ ಎರಡೂ ಬದಿ ಮುಳ್ಳು ಗಿಡಗಳು ಬೆಳೆದಿರುವುದರಿಂದ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಅರ್ಧ ರಸ್ತೆಯನ್ನು ಗಿಡಗಳು ಆವರಿಸಿವೆ. ಇದರಿಂದಾಗಿ ಸಂತೆ ನಡೆಯುವ ಹಾಗೂ ವಿವಿಧ ಖಾಲಿ ಪ್ಲಾಟ್‌ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.
ವಾಣಿಜ್ಯ ಸೆಕ್ಟರ್‌ನಲ್ಲಿ ಮದ್ಯದ ಅಂಗಡಿಯೊಂದಿದೆ. ಅಲ್ಲಿ ಮದ್ಯ ತೆಗೆದುಕೊಳ್ಳುವ ಜನರು ಅಲ್ಲಿಯೇ ರಸ್ತೆ ಬದಿ ಕುಳಿತು ಕುಡಿಯುತ್ತಾರೆ. ಅದರ ಪಕ್ಕದ ಸೆಕ್ಟರ್‌ನಲ್ಲಿರುವ ನಿವಾಸಿಗಳಿಗೆ, ಬೇರೆ ಸೆಕ್ಟರ್‌ಗಳಿಗೆ ಹೋಗುವವರು ಮುಜುಗುರದಿಂದ ಸಂಚರಿಸಬೇಕಾದ ಸ್ಥಿತಿ ಇದೆ.
ನಿವೇಶನ ತೆಗೆದುಕೊಂಡ ಎರಡು ವರ್ಷಗಳಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ನಿವೇಶನ ನೀಡಲಾಗಿರುತ್ತದೆ. ಆದರೆ, ಹತ್ತಾರು ವರ್ಷಗಳಾದರೂ ಕಟ್ಟಡಗಳ ನಿರ್ಮಾಣವಾಗಿಲ್ಲ. ಇದನ್ನು ಕೇಳಬೇಕಾದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವೂ ಮೌನವಾಗಿದೆ.
ಕಟ್ಟಡಗಳನ್ನು ನಿರ್ಮಿಸಿಕೊಳ್ಳದಿದ್ದರೂ ಪರವಾಗಿಲ್ಲ. ನಿವೇಶನಗಳನ್ನು ಸ್ವಚ್ಛವಾಗಿಯಾದರೂ ಇಟ್ಟುಕೊಳ್ಳಬೇಕು. ಹತ್ತಾರು ವರ್ಷಗಳಿಂದ ತಿರುಗಿ ನೋಡದ್ದರಿಂದ ಜಾಲಿ ಗಿಡಗಳು ಬೆಳೆದು ಸಂಚಾರಕ್ಕೂ ತೊಂದರೆಯಾಗುತ್ತಿದೆ.
‘ನಿವೇಶನಗಳ ಸ್ವಚ್ಛತೆಗೆ ಬಿಟಿಡಿಎ ಕ್ರಮಕೈಗೊಳ್ಳಬೇಕು. ಜನರಿಗೆ ತೀವ್ರ ತೊಂದರೆಯಾಗುತ್ತಿದ್ದು, ಅದನ್ನು ಕೂಡಲೇ ಬಗೆಹರಿಸಬೇಕು’ ಎಂದು ನಿವಾಸಿ ಮಲ್ಲಿಕಾರ್ಜುನ ಗೌಡರ ಒತ್ತಾಯಿಸಿದರು.
ಹಣಕಾಸಿನ ಕೊರತೆ ಇರುವುದರಿಂದ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಕೂಡಲೇ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುವುದುಚಂದ್ರಹಾಸ ಬಂಡಿ ಸಿಇ ಬಿಟಿಡಿಎ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.