
ಮಹಾಲಿಂಗಪುರ: ‘ಪಟ್ಟಣದ ಗಡಾದಗಲ್ಲಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಕುಡಿಯುವ ನೀರಿನ ಟ್ಯಾಂಕ್ ಪಕ್ಕದಲ್ಲೇ ನೂತನ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ್ದೇನೆ’ ಎಂದು ಶಾಸಕ ಸಿದ್ದು ಸವದಿ ಸೂಚಿಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ನಡೆಸಿದ ನಂತರ ಅವರು ಮಾತನಾಡಿ, ‘ಈಗಿರುವ ಕುಡಿಯುವ ನೀರಿನ ಟ್ಯಾಂಕ್ ಬಹಳಷ್ಟು ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಅದರ ಚಾವಣಿ ಶಿಥಿಲಗೊಂಡು ಕುಸಿದು ಬಿದ್ದಿದ್ದರಿಂದ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಆದರೂ ಅದು ಭದ್ರ ಆಗುವುದಿಲ್ಲ. ಹೀಗಾಗಿ, ಅದರ ಪಕ್ಕದಲ್ಲೇ ನೂತನ ನೀರಿನ ಟ್ಯಾಂಕ್ ನಿರ್ಮಿಸಿ ನೀರು ಪೂರೈಕೆ ಮಾಡಿದರೆ ನಿವಾಸಿಗಳಿಗೆ ನೀರಿನ ಸಮಸ್ಯೆ ನೀಗಲಿದೆ’ ಎಂದರು.
‘ಪಟ್ಟಣದಲ್ಲಿ ಚರಂಡಿ ಸ್ವಚ್ಛತೆ, ಕುಡಿಯುವ ನೀರು ಪೂರೈಕೆ, ಬೀದಿದೀಪದ ಅಳವಡಿಕೆಗೆ ಆದ್ಯತೆ ನೀಡಲು ಹಾಗೂ ವಾರ್ಡ್‌ವಾರು ಸಂಚರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಘನತ್ಯಾಜ್ಯ ವಿಲೇವಾರಿ ಹಾಗೂ ನೀರು ಸರಬರಾಜು ಸಂಬಂಧಿಸಿ ಪ್ರತ್ಯೇಕ ವಾಟ್ಸಆ್ಯಪ್ ಗ್ರೂಪ್ ಮಾಡಿಕೊಂಡು ಅಪಡೇಟ್ ಮಾಡಲು ಸೂಚಿಸಲಾಗಿದೆ. ನಾನೇ ವಾರದಲ್ಲಿ ಎರಡು ದಿನ ವಾರ್ಡ್‌ವಾರು ಸಂಚರಿಸಿ ಸಾರ್ವಜನಿಕರ ಸಮಸ್ಯೆ ಆಲಿಸುತ್ತೇನೆ. ಪುರಸಭೆ ವಾಣಿಜ್ಯ ಮಳಿಗೆಗಳ ಬಾಕಿಯನ್ನು ಕಡ್ಡಾಯವಾಗಿ ವಸೂಲಿ ಮಾಡಲು ಸಹ ಸೂಚಿಸಿದ್ದೇನೆ’ ಎಂದರು.
‘ಆಡಳಿತ ವ್ಯವಸ್ಥೆ ಸುಗಮವಾಗಿ ಸಾಗಲು ಪುರಸಭೆಗೆ ಕಾಯಂ ಎಂಜಿನಿಯರ್ ನೇಮಕ ಮಾಡಬೇಕು. ತುರ್ತಾಗಿ ಹೆಚ್ಚುವರಿಯಾಗಿ ಬೇರೆ ಸ್ಥಳೀಯ ಸಂಸ್ಥೆಯಿಂದ ಒಬ್ಬರನ್ನಾದರೂ ನೇಮಕ ಮಾಡುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ತಿಳಿಸಿದ್ದೇನೆ’ ಎಂದರು.
ವಿವಿಧ ವಾರ್ಡ್‌ಗಳ ನಿವಾಸಿಗಳ ಅಹವಾಲು ಸ್ವೀಕರಿಸಿ ಸಮಸ್ಯೆ ಪರಿಹರಿಸಲು ಸೂಚಿಸಿದರು. ನಂತರ ಪುರಸಭೆ ನೀರು ಸರಬರಾಜು ಸಿಬ್ಬಂದಿ ಸಮಸ್ಯೆ ಆಲಿಸಿದರು. ಸಭೆಯಲ್ಲಿ ಮುಖ್ಯಾಧಿಕಾರಿ ಎನ್.ಎ.ಲಮಾಣಿ, ಅಧಿಕಾರಿಗಳಾದ ಎಸ್.ಎನ್.ಪಾಟೀಲ, ಪಿ.ವೈ.ಸೊನ್ನದ, ಸಿ.ಎಸ್.ಮಠಪತಿ, ಸಿಬ್ಬಂದಿಗಳಾದ ಪಿ.ಡಿ.ನಾಗನೂರ, ಎಂ.ಎಸ್.ಮುಲ್ಲಾ, ವಿಕ್ರಮ ಹವಾಲ್ದಾರ, ಮನೋಜ ಹಂಚಾಟೆ, ಅಮೀನ ನದಾಫ್, ಅರುಣ ಸಣ್ಣಕ್ಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.