
ಬೀಳಗಿ: ಕರ್ನಾಟಕ ಮೆಡಿಕೋ ಲೀಗಲ್ ಸೊಸೈಟಿ (ಕೆಎಎಂಎಲ್‌ಎಸ್) ಮತ್ತು ಬಾಡಗಂಡಿಯ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ನ.7 ಮತ್ತು 8 ರಂದು ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳ ವಿಧಿ ವಿಜ್ಞಾನ ವೈದ್ಯಕೀಯ ಮತ್ತು ವಿಶೇಷ ಶಾಸ್ತ್ರ ವಿಭಾಗಗಳಿಂದ 33ನೇ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎಸ್. ಆರ್.ಪಾಟೀಲ ಹೇಳಿದರು.
ಬಾಡಗಂಡಿಯ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದೈನಂದಿನ ತನಿಖೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವುದು, ಅವುಗಳ ಸಾಕ್ಷ್ಯ ಸಂಗ್ರಹ, ಇತರ ಪ್ರಮಾಣಿಕರಣ, ಸಾಗಣೆ, ಚಾರ್ಜ್ ಶೀಟ್ ಸಾಕ್ಷಿಗಳಿಗೆ ಸಮನ್ಸ ನೀಡುವುದಕ್ಕೆ ಹಲವು ಕ್ರೈ೦ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಒಬ್ಬ ಮುಗ್ದ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಡಿನ್ ಧರ್ಮರಾಯ ಇಂಗಳೆ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ 200 ವೈದ್ಯರು ಸಮ್ಮೆಳನದಲ್ಲಿ ಭಾಗಿಯಾಗುವರು ಎಂದರು.
ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಎಂ.ಎನ್. ಪಾಟೀಲ ಮಾತನಾಡಿ, ರಾಜ್ಯ ಹೈಕೋರ್ಟ್ ನ್ಯಾಯಾಧೀಶ ರವಿ.ವಿ. ಹೊಸಮನಿ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿ ವಿಭಾಗದ ಐಜಿಪಿಯಾದ ಚೇತನಸಿಂಗ್ ರಾಠೋಡ ಮತ್ತು ಕೆ.ಎ.ಎಂ.ಎಲ್.ಎಸ್ ಕಾರ್ಯದರ್ಶಿ ಡಾ. ಸೋಮಶೇಖರ ಪೂಜಾರ, ಡಾ.ಎಂ.ಎ.ಬಗಲಿ ಭಾಗವಹಿಸುವರು ಮತ್ತು ನ.8ರಂದು ಎಂಆರ್‌ಐ ಸ್ಕ್ಯಾನ್ ನೂತನ ಯಂತ್ರ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ, ವೈದ್ಯಕೀಯ ಅಧಿಕ್ಷಕ ವಿಜಯಾನಂದ ಹಳ್ಳಿ, ಬಿ.ಎ.ಎಮ.ಎಸ್ ಕಾಲೇಜಿನ ಪ್ರಾಚಾರ್ಯೆ ಡಾ. ರಾಜೇಶ್ವರಿ ಬಿರಾದಾರ, ಸಂಸ್ಥೆಯ ಉಪಾಧ್ಯಕ್ಷೆ ಅನುಷಾ ಪಾಟೀಲ, ಅಶೋಕ ದಾದಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.