
ಇಳಕಲ್: ಪ್ರತಿ ತಾಲ್ಲೂಕಿನಲ್ಲೂ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ, ಹುನಗುಂದ ಮತಕ್ಷೇತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ ಹಾಗೂ ಇಳಕಲ್ ನಗರಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಬಿಜೆಪಿ ತಾಲ್ಲೂಕು ಘಟಕ, ಬಿಜೆಪಿ ರೈತ ಮೋರ್ಚಾದಿಂದ ರಾಜ್ಯ ಸರ್ಕಾರ ಹಾಗೂ ಶಾಸಕ ಕಾಶಪ್ಪನವರ ವಿರುದ್ಧ ನಡೆಸಿದ ಪ್ರತಿಭಟನಾ ಮೆರವಣಿಗೆಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ್ ಚಾಲನೆ ನೀಡಿದರು.
ಕಂಠಿ ವೃತ್ತದಲ್ಲಿ ಪ್ರತಿಭಟನಾ ರ‍್ಯಾಲಿ ಉದ್ದೇಶಿಸಿ ಶಾಂತಗೌಡ ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ರೈತರು ಬೆಳೆದ ಮೆಕ್ಕೆಜೋಳದ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸಿಎಂ, ಡಿಸಿಎಂ ಹಾಗೂ ಕಾಂಗ್ರೆಸ್ ಮುಖಂಡರು ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ರೈತರ, ನೇಕಾರರ ಸಂಕಷ್ಟಕ್ಕೆ ಸ್ಪಂದಿಸದೇ ದುರಾಡಳಿತ ನಡೆಸಿದ್ದಾರೆ. ಇಲ್ಲಿಯ ಶಾಸಕರು ಅಧಿಕಾರಿಗಳನ್ನು, ಪೊಲೀಸರನ್ನು ಬಳಸಿಕೊಂಡು ದಬ್ಬಾಳಿಕೆ ನಡೆಸಿದ್ದಾರೆ’ ಎಂದು ಆರೋಪಿಸಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ‘ಇಲ್ಲಿಯ ಶಾಸಕರು ಅಧಿಕಾರದ ದುರ್ಬಳಕೆ ಮಾಡಿಕೊಂಡು ದೌರ್ಜನ್ಯ, ಭ್ರಷ್ಟಾಚಾರ ನಡೆಸಿದ್ದಾರೆ. ಶಾಸಕರು ಮತ್ತು ಅವರ ಹಿಂಬಾಲಕರು ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಕೆಳ ಮಟ್ಟದ ಭಾಷೆ ಬಳಕೆ ಮಾಡುವುದು ಜನಪ್ರತಿನಿಧಿ ಆದವರಿಗೆ ಶೋಭೆಯಲ್ಲ. ಅವರ ಭಾಷೆಯಲ್ಲಿ ಮಾತನಾಡಲು ನಮಗೂ ಗೊತ್ತು. ಆದರೆ ಅದು ನಮ್ಮ ಸಂಸ್ಕಾರ ಅಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಪಾಠ ಕಲಿಸಲಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿರೇಶ ಉಂಡೋಡಿ, ರಾಜಕುಮಾರ ಬಾದವಾಡಗಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಹಾಂತಗೌಡ ತೊಂಡಿಹಾಳ ಮಾತನಾಡಿದರು.
ಮುಖಂಡರಾದ ಅಜ್ಜಪ್ಪ ನಾಡಗೌಡ, ಅಶೋಕ ಬಂಡರಗಲ್ಲ, ಶೋಭಾ ಆಮದಿಹಾಳ, ಲಕ್ಷ್ಮಣ ಗುರಂ, ಅರವಿಂದ ಮಂಗಳೂರು ಸೇರಿದಂತೆ ಬಿಜೆಪಿ ಮುಖಂಡರು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಗರದ ಕಂಠಿ ವೃತ್ತದಿಂದ ಆರಂಭವಾದ ಪ್ರತಿಭಟನೆಯಲ್ಲಿ ಚಕ್ಕಡಿಗಳು ಪಾಲ್ಗೊಂಡಿದ್ದವು. ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟಿಸಿದರು. ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಶಾಸಕ ಕಾಶಪ್ಪನವರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ ಮೆರವಣಿಗೆ ನಂತರ ತಹಶೀಲ್ದಾರ್ ಅಮರೇಶ ಪಮ್ಮಾರ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.