ADVERTISEMENT

‘ಬಿಜೆಪಿಯಿಂದ ಕಾಂಗ್ರೆಸ್ ಪ್ರಣಾಳಿಕೆಯ ನಕಲು’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 7:18 IST
Last Updated 11 ಏಪ್ರಿಲ್ 2019, 7:18 IST

ಬಾಗಲಕೋಟೆ: ‘ಲೋಕಸಭೆ ಚುನಾವಣೆಗೆ ಬಿಜೆಪಿ ನೀಡಿರುವ ಪ್ರಣಾಳಿಕೆ ಕಾಂಗ್ರೆಸ್ ಪ್ರಣಾಳಿಕೆಯ ನಕಲು ಸೋಲುವ ಭಯದಿಂದ ಬಿಜೆಪಿಯವರು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಕದ್ದಿದ್ದಾರೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಲೇವಡಿ ಮಾಡಿದರು.

‘ದೇಶದ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಮಾಧ್ಯಮದವರನ್ನು ಎದುರಿಸುವ ಧೈರ್ಯವಿಲ್ಲ. ಕೇವಲ ಪ್ರಾಯೋಜಿತ ಗೋಷ್ಠಿಗಳನ್ನು ಮಾತ್ರ ನಡೆಸಿದ್ದಾರೆ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ರಾಜಸ್ಥಾನದ ರಾಜ್ಯಪಾಲ ಕಲ್ಯಾಣ ಸಿಂಗ್ ನಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡು ನರೇಂದ್ರ ಮೋದಿಗೆ ಮತ ಹಾಕುವಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ. ರಾಜ್ಯವೊಂದರ ರಾಜ್ಯಪಾಲ ಈ ರೀತಿ ಸಂವಿಧಾನಕ್ಕೆ ವಿರೋಧವಾದ ಕೆಲಸ ಮಾಡುತ್ತಿದ್ದಾರೆ. ಅವರು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಅನರ್ಹರು. ಲೋಕಸಭೆ ಚುನಾವಣೆ ಮುಗಿಯುವವರೆಗೆ ರಾಷ್ಟ್ರಪತಿಗಳು ಅವರನ್ನು ಆ ಹುದ್ದೆಯಿಂದ ಸಸ್ಪೆಂಡ್ ಮಾಡಬೇಕು’ ಎಂದರು.

ADVERTISEMENT

‘ಮಧ್ಯ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾರತೀಯ ಸೇನೆಗೆ ಮೋದಿ ಸೇನೆ ಎನ್ನುತ್ತಿದ್ದಾರೆ. ಸೇನೆಯನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ, ಇದು ದೇಶದ್ರೋಹಿ ಕೆಲಸವಾಗಿದೆ. ಚುನಾವಣೆ ಮುಗಿಯುವವರೆಗೆ ಬಾಯಿ ಮುಚ್ಚಿಕೊಂಡು ಕುಳಿತು ಕೊಳ್ಳುವಂತೆ ಅವರಿಗೆ ಚುನಾವಣಾ ಆಯೋಗ ತಾಕೀತು ಮಾಡಬೇಕು’ ಎಂದು ಆಗ್ರಹಿಸಿದರು.

‘ಸೈನಿಕರ ರೀತಿಯಲ್ಲಿ ಬಟ್ಟೆ ತೊಟ್ಟು ಕಣ್ಣಿಗೆ ಗಾಗಲ್ ಹಾಕಿಕೊಂಡು ಜನರನ್ನು ಆಕರ್ಷಣೆ ಮಾಡುತ್ತಿದ್ದೀರಿ ನೀವೇನು ಸೈನಿಕರಾ, ನಮ್ಮಲ್ಲೇನು ಮಿಲಿಟರಿ ಆಡಳಿತವಿದೇಯಾ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನಿಸಿದ ಎಚ್.ಕೆ.ಪಾಟೀಲ, ಪ್ರಧಾನಿಗೆ ಒಂದು ಕಾನೂನು ಬೇರೆಯವರಿಗೊಂದು ಕಾನೂನು ಇದೆಯೇ’ ಎಂದು ಪ್ರಶ್ನಿಸಿದರು.

‘ಪಾಕಿಸ್ತಾನಕ್ಕೆ ತೊಂದರೆಯಾದರೆ ದೋಸ್ತಿಗಳಿಗೆ ಕಣ್ಣೀರು ಎಂದು ಅತ್ಯಂತ ಕೆಳಮಟ್ಟದಲ್ಲಿ ಮೋದಿ ಮಾತಾಡುತ್ತಾರೆ. ‘ವಂದೇ ಮಾತರಂ’ ಎಂದು ಬ್ರಿಟಿಷರ ಗುಂಡಿಗೆ ಎದೆಯೊಡ್ಡಿದವರು ಕಾಂಗ್ರೆಸ್ಸಿಗರು. ಕಾಶ್ಮೀರದಪುಲ್ವಾಮಾದಲ್ಲಿ ದಾಳಿ ನಡೆದು ಎಂಟು ಗಂಟೆಯ ನಂತರ ದೇಶಕ್ಕೆ ಉತ್ತರ ನೀಡಿದ್ದ ಮೋದಿ, ಕಾಂಗ್ರೆಸ್‌ನವರಿಗೆ ದೇಶ ಭಕ್ತಿ ಹೇಳಿ ಕೊಡುತ್ತಾರಾ’ ಎಂದರು.

ಮೈತ್ರಿ ಸರ್ಕಾರದ್ದು ಹಳ್ಳಿ ಲವ್..

ಕಾಂಗ್ರೆಸ್ ಜೆಡಿಎಸ್ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ.ಅಲ್ಪ ಸ್ವಲ್ಪ ಗೊಂದಲಗಳಿದ್ದರೂ ರಾಹುಲ್ ಗಾಂಧಿ ಬಂದು ಹೋದರೆ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಮೈತ್ರಿ ಒಪ್ಪಂದ ಅರೇಂಜ್ಡ್ ಮ್ಯಾರೇಜ್ ಹೌದು, ಲವ್ ಮ್ಯಾರೇಜ್ ಕೂಡಾ ಹೌದು. ಇದು ಒಂದು ರೀತಿ ಹಳ್ಳಿ ಲವ್ ಇದ್ದಂಗೆ ಎಚ್.ಕೆ.ಪಾಟೀಲ ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.