
ಮಹಾಲಿಂಗಪುರ: ಪಟ್ಟಣದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡು ಸಾಮಾಜಿಕ ಹೋರಾಟಗಾರ ಚನಬಸು ಹುರಕಡ್ಲಿ ನೀಲ ನಕ್ಷೆ ತಯಾರಿಸಿದ್ದು, ಹಲವು ಸಲಹೆಗಳನ್ನು ನೀಡಿ ಸರ್ಕಾರದ ಮಟ್ಟದಲ್ಲಿ ಪತ್ರದ ಮೂಲಕ ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ಶಾಸಕರು, ಸಚಿವರಿಗೆ, ಅಧಿಕಾರಿಗಳಿಗೆ ಪತ್ರ ಕಳುಹಿಸಲಾಗುವುದು. ಅವರಿಂದ ಬರುವ ಸ್ಪಂದನೆ ನೋಡಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು’ ಎಂದರು.
‘ಈಗಾಗಲೇ ಪತ್ರದ ಮೂಲಕ ಹೋರಾಟ ಮಾಡಿದ್ದರಿಂದ ಬಸವೇಶ್ವರ ವೃತ್ತದಿಂದ ಢವಳೇಶ್ವರ ಕಮಾನುವರೆಗೆ ಬೀದಿದೀಪ ಅಳವಡಿಸಲಾಗಿದೆ. ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಮಂಜೂರಾಗಿ ರಸ್ತೆ ನಿರ್ಮಾಣವಾಗಿದೆ. ಹೀಗಾಗಿ, ಇದೇ ರೀತಿ ಪತ್ರದ ಮೂಲಕ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಹೋರಾಟಕ್ಕೆ ಅಣಿಯಾಗಿದ್ದು, ಸಾರ್ವಜನಿಕರು ಪಕ್ಷಾತೀತ, ಜಾತ್ಯಾತೀತವಾಗಿ ಇದಕ್ಕೆ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
‘ಅಂತರ್ಜಲಕ್ಕೆ ಮೂಲಾಧಾರವಾಗಿರುವ ಪಟ್ಟಣದ ಕೆರೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡುವುದು. ಇದರ ಜೊತೆಗೆ ಕೆರೆಯ ಪಕ್ಕದಲ್ಲಿರುವ ಪುರಸಭೆಯ ನಾಲ್ಕು ಎಕರೆ ಜಾಗದಲ್ಲಿ ಉದ್ಯಾನ ಹಾಗೂ ಸರ್ಕಾರಿ ಕಚೇರಿಗಳ ಕಟ್ಟಡಗಳನ್ನು ನಿರ್ಮಾಣ ಮಾಡುವುದು. ಹಿಂದೂ ರುದ್ರಭೂಮಿ ಅಭಿವೃದ್ಧಿ ಪಡಿಸುವುದು, ಪಾಳುಬಿದ್ದ ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿ ಎರಡಂತಸ್ತಿನ ಕಟ್ಟಡ ನಿರ್ಮಿಸಿ ಸರ್ಕಾರಿ ಕಚೇರಿಗಳಿಗೆ ಅವಕಾಶ ಕಲ್ಪಿಸುವುದು, ಪಟ್ಟಣಕ್ಕೆ ಒಳಚರಂಡಿ (ಯುಜಿಡಿ) ಯೋಜನೆ ಅನುಷ್ಠಾನಗೊಳಿಸುವ ಕಾಮಗಾರಿಯ ನೀಲನಕ್ಷೆ ತಯಾರಿಸಲಾಗಿದ್ದು, ಸರ್ಕಾರ ಶೀಘ್ರ ಇವುಗಳನ್ನು ಅಳವಡಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.