ಬೀಳಗಿ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದು, ನಿಗಮದ ಸೌಲಭ್ಯಗಳ ಕುರಿತು ಬ್ರಾಹ್ಮಣ ಸಮಾಜದ ಬಂಧುಗಳಿಗೆ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ರಾಜ್ಯದ ವಿವಿಧ ತಾಲ್ಲೂಕುಗಳಿಗೆ ಬೇಟಿ ನೀಡುತ್ತಿದ್ದೇನೆ ಎಂದು ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೂಡು ಜಯಸಿಂಹ ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಂಗಸಂಸ್ಥೆಗಳಾದ ಬಾಗಲಕೋಟೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಬೀಳಗಿ ಘಟಕದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮ ರಚನೆ ಮಾಡಿದರು. ಬಜೆಟ್‌ನಲ್ಲಿ ₹50 ಕೋಟಿ ಘೋಷಣೆ ಮಾಡಿ ₹25 ಕೋಟಿ ಮಾತ್ರ ನೀಡಿದ್ದರು. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮಕ್ಕೆ ₹30 ಕೋಟಿ ಹಣ ನೀಡಿದ್ದಾರೆ ಅದರಲ್ಲಿ ₹13 ಕೋಟಿ ಹಣ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿದ್ದೇವೆ. ಉಳಿದ ₹17 ಕೋಟಿ ನಿಗಮದಲ್ಲಿದೆ. ಬ್ರಾಹ್ಮಣ ಸಮಾಜದ ಬಡವರ ಏಳಿಗೆಗಾಗಿ ಹಲವು ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ಬಾಗಲಕೋಟೆ ಜಿಲ್ಲಾ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ರಾಜೇಂದ್ರ ದೇಶಪಾಂಡೆ ಮಾತನಾಡಿ, ಇಲ್ಲಿಯವರೆಗಿನ ಬ್ರಾಹ್ಮಣ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷರು ಯಾರೂ ಕೂಡ ತಾಲ್ಲೂಕಿಗೆ ಭೇಟಿ ನೀಡಿರಲಿಲ್ಲ. ಪ್ರಥಮ ಬಾರಿಗೆ ಅಸಗೂಡು ಜಯಸಿಂಹ ಅವರು ಆಗಮಿಸಿದ್ದು ನಮಗೆಲ್ಲ ಸಂತೋಷವನ್ನುಂಟು ಮಾಡಿದೆ. ಸಮಾಜದ ಅಭಿವೃದ್ಧಿಗೆ ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಶಕ್ತಿ ತುಂಬ ಕೆಲಸ ಮಾಡಿ ಎಂದು ವಿನಂತಿಸಿದರು.
ಬೀಳಗಿ ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಉಡುಪಿ ಕೃಷ್ಣಾ ಶೇಷಗಿರಿ ರಾವ್ ಬಾಡಗಂಡಿ ಮನವಿ ಸಲ್ಲಿಸಿ ಮಾತನಾಡಿದರು. ಗುರುರಾಜ ಗೊಂಬಿ, ಪ್ರಜ್ಞಾ ಪ್ರಮೋದ ದೇಶಪಾಂಡೆ ಮಾತನಾಡಿದರು.
ವಿನಾಯಕ ದೇಸಾಯಿ, ಅನಂತ ಮಳಗಿ, ಪ್ರಸನ್ನ ನರಗುಂದ, ಅನೀಲ ಗುಡೂರ ಇದ್ದರು. ರಾಧಿಕಾ ಬಾಡಗಂಡಿ ನಿರೂಪಿಸಿದರು. ರಾಧಾ ತಡಸ ಸ್ವಾಗತಿಸಿದರು.
₹30ಕೋಟಿ ಅನುದಾನ ನೀಡಿದ ಸಿದ್ದರಾಮಯ್ಯ ₹13ಕೋಟಿ ಶಿಷ್ಯವೇತನ ಹಂಚಿಕೆ ಸಮಾಜಕ್ಕೆ ಶಕ್ತಿ ತುಂಬಲು ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.