ADVERTISEMENT

ಮಹಾಲಿಂಗಪುರ: ಸೇವೆಗೆ ಮುಕ್ತವಾಗದ ಬಸ್ ನಿಲ್ದಾಣ

₹1.57 ಕೋಟಿ ವೆಚ್ಚದಲ್ಲಿ ನಿರ್ಮಾಣ | ರಸ್ತೆಯಲ್ಲೇ ಕಾಯುವ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 4:49 IST
Last Updated 17 ಮಾರ್ಚ್ 2025, 4:49 IST
ರನ್ನಬೆಳಗಲಿ ಪಟ್ಟಣದಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ಪಾರ್ಕಿಂಗ್ ಸ್ಥಳವಾಗಿ ಪರಿವರ್ತನೆಯಾಗಿದೆ
ರನ್ನಬೆಳಗಲಿ ಪಟ್ಟಣದಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ಪಾರ್ಕಿಂಗ್ ಸ್ಥಳವಾಗಿ ಪರಿವರ್ತನೆಯಾಗಿದೆ   

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣದಲ್ಲಿ ₹1.57 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ಉದ್ಘಾಟನೆಗೊಂಡರೂ ಪ್ರಯಾಣಿಕರ ಸೇವೆಗೆ ಮುಕ್ತವಾಗಿಲ್ಲ.

ರನ್ನಬೆಳಗಲಿ ಪಟ್ಟಣದ ಮೂಲಕ ಮುಧೋಳ–ನಿಪ್ಪಾಣಿ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಆದರೆ, ಬಸ್ ನಿಲ್ದಾಣ ಆರಂಭ ಆಗದೇ ಇರುವುದರಿಂದ ಪ್ರಯಾಣಿಕರು ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ನಿಂತುಕೊಳ್ಳುವ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಸಣ್ಣಪುಟ್ಟ ಅಪಘಾತಕ್ಕೂ ಆಸ್ಪದ ನೀಡುತ್ತಿದೆ.

ರನ್ನಬೆಳಗಲಿ ಪಟ್ಟಣವು 20 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಆಡಳಿತ ದೃಷ್ಟಿಯಿಂದ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. 2016–17ರಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣವಾಗಿದ್ದು, ಇದಕ್ಕೂ ಮುನ್ನ ಪಟ್ಟಣದಲ್ಲಿ ಚಿಕ್ಕದಾದ ಬಸ್ ತಂಗುದಾಣ ಇತ್ತು. ಅದನ್ನು ಹೆದ್ದಾರಿ ಕಾಮಗಾರಿ ವೇಳೆ ನೆಲಸಮಗೊಳಿಸಲಾಗಿತ್ತು. ಬಳಿಕ ತಂಗುದಾಣವೇ ಇರಲಿಲ್ಲ. ಈಗ ಬಸ್ ನಿಲ್ದಾಣ ಇದ್ದರೂ ಇಲ್ಲದಂತಾಗಿರುವ ಪರಿತಾಪ ಒಂದೆಡೆಯಾದರೆ ಇನ್ನೊಂದೆಡೆ ಶೌಚಾಲಯ ವ್ಯವಸ್ಥೆಯೂ ಇಲ್ಲದೆ ಪ್ರಯಾಣಿಕರು ಬವಣೆ ಪಡುತ್ತಿದ್ದಾರೆ.

ADVERTISEMENT

ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ, ಮೀರಜ್, ಸವದತ್ತಿ, ಬಾಗಲಕೋಟೆ ಮುಂತಾದ ಪಟ್ಟಣಗಳಿಗೆ ರನ್ನಬೆಳಗಲಿ ಪಟ್ಟಣದ ಮೂಲಕ ಬಸ್‍ಗಳು ಸಂಚರಿಸುತ್ತವೆ. ನಿತ್ಯವೂ 60ಕ್ಕೂ ಹೆಚ್ಚಿನ ಬಸ್‍ಗಳು ಈ ಮಾರ್ಗದಲ್ಲಿ ಹಾದು ಹೋಗುತ್ತವೆ. ಹೀಗಾಗಿ, ಈ ಪಟ್ಟಣದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣದ ಅಗತ್ಯ ಅರಿತು ಅಂದಿನ ಸರ್ಕಾರ 2021ರಲ್ಲಿ ಬಸ್ ನಿಲ್ದಾಣಕ್ಕೆ ಮಂಜೂರು ನೀಡಿತ್ತು. ಇದಕ್ಕೆ ಸ್ಪಂದಿಸಿದ ಪಟ್ಟಣ ಪಂಚಾಯಿತಿಯು ಲೋಕೋಪಯೋಗಿ ಇಲಾಖೆಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗ ನೀಡಿತ್ತು. ಲೋಕೋಪಯೋಗಿ ಇಲಾಖೆಯು ನಿಲ್ದಾಣ ಕಾರ್ಯವನ್ನು 2023ರ ಅ.25ರಂದು ಪೂರ್ಣಗೊಳಿಸಿದೆ.

ನಿಲ್ದಾಣದ ನಿರ್ವಹಣೆ ಮತ್ತು ಮೇಲುಸ್ತುವಾರಿ ಜವಾಬ್ದಾರಿ ನಮ್ಮದು. ಸಾರಿಗೆ ಇಲಾಖೆಗೆ ಅಗತ್ಯ ಸಿಬ್ಬಂದಿ ನೀಡುವಂತೆ ಪತ್ರ ಬರೆದು ಶೀಘ್ರವೇ ಕಾರ್ಯಾಚರಣೆ ಆರಂಭಿಸಲಾಗುವುದು
ಎನ್.ಎ. ಲಮಾಣಿ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ ರನ್ನಬೆಳಗಲಿ

ಒಂದು ಬಳಿಕ, ಅಂದರೆ ಕಳೆದ ಫೆಬ್ರವರಿಯಲ್ಲಿ ಬಸ್ ನಿಲ್ದಾಣ ಉದ್ಘಾಟನೆಗೊಂಡಿದೆ. ಆದರೆ, ಈವರೆಗೆ ಇಲ್ಲಿಂದ ಬಸ್ ಕಾರ್ಯಾಚರಣೆ ಆರಂಭವಾಗಿಲ್ಲ. ಬದಲಾಗಿ ವಾಹನ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಕಾಮಗಾರಿ ಪೂರ್ಣಗೊಂಡ ನಂತರ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಬೇಕಾದ ಲೋಕೋಪಯೋಗಿ ಇಲಾಖೆಯು ನಿಲ್ದಾಣ ಉದ್ಘಾಟನೆ ನಂತರ ಮಾರ್ಚ್ 6ರಂದು ಕಟ್ಟಡವನ್ನು ಹಸ್ತಾಂತರಿಸಿದೆ.

ರನ್ನಬೆಳಗಲಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಪಕ್ಕ ಬಿಸಿಲಲ್ಲಿ ಬಸ್‍ಗಾಗಿ ಕಾಯುದ್ದ ಪ್ರಯಾಣಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.