ರಬಕವಿ ಬನಹಟ್ಟಿ: ಬನಹಟ್ಟಿ ಮತ್ತು ಜಮಖಂಡಿ ರಾಜ್ಯ ಹೆದ್ದಾರಿಯ ಸಮೀಪದ ಯಲ್ಲಟ್ಟಿ ಗ್ರಾಮದ ರೈತ ವೆಂಕಟೇಶ ಮೋಪಗಾರ ತಮ್ಮ ಮೂರು ಎಕರೆ ಪ್ರದೇಶದ ತೋಟದ 1 ಎಕರೆ 10 ಗುಂಟೆ ಪ್ರದೇಶದಲ್ಲಿ ಕ್ಯಾಪ್ಸಿಕಮ್ ಬೆಳೆದು ಲಕ್ಷಾಂತರ ಲಾಭ ಪಡೆಯುತ್ತಿದ್ದಾರೆ.
ಕೃಷ್ಣಾ ಮತ್ತು ಘಟಪ್ರಭಾ ಎಡದಂಡೆ ಕಾಲುವೆಯಿಂದಾಗಿ ಈ ಭಾಗದ ಬಹುತೇಕ ರೈತರು ಕಬ್ಬು, ಅರಿಸಿನ, ಬಾಳೆ ಹಣ್ಣು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ.ಆದರೂ ಕೆಲವು ಯುವ ರೈತರು ಚಿಕ್ಕ ಪ್ರದೇಶದಲ್ಲಿ ನಾಲ್ಕಾರು ತಿಂಗಳುಗಳ ತರಕಾರಿ ಬೆಳೆ ಬೆಳೆದು ಉತ್ತಮ ಆದಾಯ ಪಡೆದು, ಇತರರಿಗೆ ಮಾದರಿಯಾಗಿದ್ದಾರೆ.
‘ಜುಲೈ ತಿಂಗಳ ಕೊನೆ ವಾರದಲ್ಲಿ ಅಂದಾಜು 20 ಸಾವಿರದಷ್ಟು ಸಸಿಗಳನ್ನು ನಾಟಿ ಮಾಡಿಲಾಗಿತ್ತು. ನಾಟಿ ಮಾಡಿದ 45 ದಿನಗಳ ನಂತರ ಕಾಯಿಗಳು ಬರಲಾರಂಭಿಸಿದವು. ಈಗ ಎರಡು ಬಾರಿ ಕಟಿಂಗ್ ಮಾಡಲಾಗಿದೆ. ವಾರಕ್ಕೆ ಒಂದು ಬಾರಿ ಮಾತ್ರ ಕ್ಯಾಪ್ಸಿಕಮ್ ಕಟಿಂಗ್ ಮಾಡಲಾಗುತ್ತಿದೆ. ಒಂದು ವಾರಕ್ಕೆ ಅಂದಾಜು ಮೂರು ಟನ್ ಕ್ಯಾಪ್ಸಿಕಮ್ ಇಳುವರಿ ಬರುತ್ತದೆ’ ಎನ್ನುತ್ತಾರೆ ರೈತ ವೆಂಕಟೇಶ.
‘ಗಿಡಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ನಾಲ್ಕು ತಿಂಗಳೊಳಗೆ ಇಳುವರಿ ಪಡೆಯಬಹುದು. ಭೂಮಿಯನ್ನು ಹದ ಮಾಡುವುದು, ಮಲ್ಚಿಂಗ್ ಪೇಪರ್, ಗೊಬ್ಬರ, ಕೂಲಿ ಕಾರ್ಮಿಕರ ಕೂಲಿ ಸೇರಿದಂತೆ ಅಂದಾಜು ₹3 ಲಕ್ಷ ವೆಚ್ಚವಾಗಿದೆ ಎನ್ನುತ್ತಾರೆ ಅವರು.
’ಈಗ ಮುಂಬೈ ನಗರದಿಂದ ನೇರವಾಗಿ ನಮ್ಮ ತೋಟಕ್ಕೆ ಬಂದು ಕ್ಯಾಪ್ಸಿಕಾಮ್ ತೆಗೆದುಕೊಂಡು ಹೋಗುತ್ತಿದ್ದಾರೆ. ಸ್ಥಳದಲ್ಲಿಯೇ ಕೆ.ಜಿಗೆ ₹ 44 ನೀಡುತ್ತಿದ್ದಾರೆ. ಎಲ್ಲವೂ ಮುಂಬೈಗೆ ಹೋಗುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಗೆ ಕಳುಹಿಸುತ್ತಿಲ್ಲ’ ಎಂದು ಅವರು ತಿಳಿಸಿದರು.
–––
ಜಗದಾಳ ಗ್ರಾಮದ ಪ್ರವಿರಾಮ ಶ್ರೀನಾಥ ಅಗ್ರಿ ಮಾಲ್ ಅವರ ಮಾರ್ಗದರ್ಶನಲ್ಲಿ ಇಂಡಸ್ ತಳಿಯ ಕ್ಯಾಪ್ಸಿಕಮ್ ಬೆಳೆಯಲಾಗಿದೆ. ಬರುವ ದಿನಗಳಲ್ಲಿ ಹೆಚ್ಚಿನ ಇಳುವರಿ ನಿರೀಕ್ಷಿಸಲಾಗಿದೆ
–ವೆಂಕಟೇಶ ಮೋಪಗಾರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.