ಬಾಗಲಕೋಟೆ: ಜಿಲ್ಲೆಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಚುರುಕಾಗಿ ನಡೆಸಿ ಕಡಿಮೆ ಅವಧಿಯಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಬಾಗಲಕೋಟೆ ತಾಲ್ಲೂಕಿನ ಇಬ್ಬರು ಶಿಕ್ಷಕರನ್ನು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಡಾ.ಸಿ.ಎಂ.ಕುಂದಗೋಳ ಸನ್ಮಾನಿಸಿ ಪ್ರಮಾಣ ಪತ್ರ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಜರುಗಿದ ಸಾಮಾಜಿಕ ಮತ್ತು ಶೈಕ್ಷಣಿ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಪಾಲ್ಗೊಂಡ ತಾಲ್ಲೂಕು ಅಧಿಕಾರಿಗಳಿಂದ ಸಮೀಕ್ಷೆಯಲ್ಲಿ ಕಂಡು ಬರುವ ಸಮಸ್ಯೆಗಳನ್ನು ಆಲಿಸಿದರು. ನಂತರ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಸ್ಯೆ ಹಾಗೂ ಪರಿಹಾರಗಳ ಕುರಿತು ಚರ್ಚೆ ನಡೆಸಿದರು. ಕಡಿಮೆ ಅವಧಿಯಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿದ ತಾಲ್ಲೂಕಿನ ಇಬ್ಬರು ಸಮೀಕ್ಷೆದಾರರಿಗೆ ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಲಾಯಿತು.
ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 4,70,648 ಕುಟುಂಬಗಳಿದ್ದು, ಸಮೀಕ್ಷೆ ಕೈಗೊಳ್ಳಲು 4323 ಸಮೀಕ್ಷೆದಾರರನ್ನು ನೇಮಕ ಮಾಡಲಾಗಿದೆ. ಇಲ್ಲಿಯವರೆಗೆ 3,26,081 ಕುಟುಂಬಗಳ ಸಮೀಕ್ಷೆ ಮಾಡಿ ಶೇ69.28 ರಷ್ಟು ಪ್ರಗತಿ ಸಾಧಿಸಲಾಗಿದೆ. ಬೀಳಗಿ ತಾಲ್ಲೂಕು ಶೇ 78.33 ಸಾಧನೆ ಮಾಡಿ ಪ್ರಥಮ ಸ್ಥಾನದಲ್ಲಿದ್ದರೆ, ಬಾಗಲಕೋಟೆ ತಾಲ್ಲೂಕು ಶೇ 54.67 ಸಾಧನೆ ಮಾಡಿ ಕೊನೆಯ ಸ್ಥಾನದಲ್ಲಿರುತ್ತದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಓ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ.ಮನ್ನೀಕೇರಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಕಜಾ ಹಾಗೂ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.