ಬಾಗಲಕೋಟೆ: ಪರಿಶಿಷ್ಟ ಜಾತಿಗಣತಿ ಕಾರ್ಯವನ್ನು ಆಯೋಗ ನಮ್ಮ ಸಮುದಾಯದ ಜನಗಣತಿ ಸರಿಯಾಗಿ ಮಾಡಿಲ್ಲ. ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಛಲವಾದಿ ಸಮುದಾಯದ ಸಂಖ್ಯೆಯನ್ನು ಕಡಿಮೆ ತೋರಿಸಿದ್ದಾರೆ ಎಂದು ಛಲವಾದಿ ಮುಖಂಡರು ದೂರಿದರು.
ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಛಲವಾದಿ ಮುಖಂಡರು ಜಾತಿ ಜನಗಣತಿ ಪ್ರಾರಂಭದಲ್ಲಿ ಗಣತಿದಾರರು ಸರಿಯಾದ ರೀತಿಯಲ್ಲಿ ಗಣತಿ ಕಾರ್ಯ ಮಾಡಿಲ್ಲ. ಸಮುದಾಯದ ಹಲವಾರು ಬಡಾವಣೆಗಳನ್ನು ಬಿಟ್ಟು ಗಣತಿ ಮಾಡಿದ್ದಾರೆ. ಇದರಿಂದ ನಮಗೆ ಸಿಗುವ ಮೀಸಲಾತಿ ಪ್ರಮಾಣ ಕಡಿಮೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶೇ 6ರಷ್ಟು ಮೀಸಲಾತಿ ನೀಡುವ ಮೂಲಕ ಸಮುದಾಯದ ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಿ ಕೊಡಬೇಕು. ಜಾತಿಗಣತಿ ನಡೆಯುವಾಗ ಆಗಿರುವ ಅನ್ಯಾಯವನ್ನು ಆಯೋಗದ ಗಮನಕ್ಕೆ ತಂದರೂ ಯಾವುದೇ ಕ್ರಮಕೊಳ್ಳಲಿಲ್ಲ ಎಂದು ದೂರಿದರು.
ವರದಿಯು ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿರುತ್ತದೆ. ಜಾತಿಗಣತಿ ಮಾಡುವವರು ಮನೆ, ಮನೆಗೆ ಭೇಟಿ ನೀಡದೆ ಎಲ್ಲೂ ಕುಳಿತು ಸರ್ವೆ ಮಾಡುವ ಮೂಲಕ ಗಣತಿ ಮಾಡಿದ್ದಾರೆ. ಸರ್ಕಾರ ಇದನ್ನು ಒಪ್ಪಿಕೊಳ್ಳದೆ ಸಚಿವ ಸಂಪುಟದ ಉಪಸಮಿತಿ ರಚನೆ ಮಾಡುವ ಮೂಲಕ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ರಮೇಶ ಗಂಜಿಹಾಳ, ರವಿ ಬಬಲೇಶ್ವರ, ಶಶಿಕಾಂತ ದೊಡಮನಿ, ಎನ್.ಬಿ.ಗಸ್ತಿ, ಯಮನಪ್ಪ ಶಿರೂರು ಮಾತನಾಡಿದರು. ಬಸವರಾಜ ಬದಾಮಿ, ಪ್ರೇಮನಾಥ ಗರಸಂಗಿ, ವಿವೇಕಾನಂದ ಗರಸಂಗಿ, ಎಚ್.ಡಿ.ಹುನ್ನೂರ, ಸಂಗಪ್ಪ ನಾರಾಯಣಿ, ಮಹೇಶ ಬೀಳಗಿ, ಶ್ರೀಶೈಲ ಚಲವಾದಿ, ಸಿದ್ದರಾಜ ಸೊನ್ನದ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.