
ಬಾಗಲಕೋಟೆ: ‘ನಾಡಿನ ಸಾಂಸ್ಕೃತಿಕ ಮತ್ತು ಪರಂಪರೆ ಬಿಂಬಿಸುವ ಚಾಲುಕ್ಯ ಉತ್ಸವವನ್ನು ಡಿ.19 ರಂದು ಬಾದಾಮಿ, 20ರಂದು ಪಟ್ಟದಕಲ್ ಹಾಗೂ 21 ರಂದು ಐಹೊಳೆಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಚಾಲುಕ್ಯ ಉತ್ಸವ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಚಾಲುಕ್ಯ ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದಾರೆ. ಸಮಯ ಕೂಡ ಕಡಿಮೆ ಇರುವುದರಿಂದ ಅಚ್ಚಕಟ್ಟಾಗಿ ವ್ಯವಸ್ಥೆ ಮಾಡಬೇಕು. ಸಿದ್ಧತೆಗೆ 20 ಸಮಿತಿಗಳನ್ನು ರಚಿಸಿಕೊಂಡು ಎರಡು ದಿನಗಳಲ್ಲಿ ವರದಿ ನೀಡಬೇಕು’ ಎಂದರು.
‘ಬಾದಾಮಿ, ಪಟ್ಟದಕಲ್ ಹಾಗೂ ಐಹೊಳೆಯಲ್ಲಿ ಬೃಹತ್ ವೇದಿಕೆ ಹಾಕಬೇಕು. ಉತ್ಸವಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆ, ರಸ್ತೆ, ನೀರು, ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ಕೊಟ್ಟು ಕಾರ್ಯಕ್ರಮ ಮತ್ತು ವಿಚಾರ ಗೋಷ್ಠಿ ಆಯೋಜಿಸಬೇಕು’ ಎಂದು ಹೇಳಿದರು.
‘ಶೇ50ರಷ್ಟು ಸ್ಥಳೀಯ ಹಾಗೂ ಶೇ50ರಷ್ಟು ಅಂತರರಾಜ್ಯ ಕಲಾವಿದರಿಗೆ ಅವಕಾಶ ನೀಡಬೇಕು. ಕಲಾವಿದರ ಗೌರವ ಸಂಭಾವನೆ ಸರಿಯಾಗಿ ಮತ್ತು ಸರಿಯಾದ ಸಮಯದಲ್ಲಿ ಪಾವತಿಸಬೇಕು. ಅನಗತ್ಯ ಗೊಂದಲಗಳನ್ನು ಸೃಷ್ಟಿಸಬಾರದು. ಊಟ ಹಾಗೂ ವಸತಿ ವ್ಯವಸ್ಥೆಯಲ್ಲಿ ಲೋಪಗಳಾಗದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಸೂಚಿಸಿದರು.
ಉತ್ಸವದ ರೂಪುರೇಷೆಗಳನ್ನು ತಯಾರಿಸಿ ಅಂದಾಜು ವೆಚ್ಚದ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದರು.
ಶಾಸಕರಾದ ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.