ಮಹಾಲಿಂಗಪುರ: ‘ಹೆಣ್ಮಕ್ಕಳಿಗೆ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮನ ಆತ್ಮಸೈರ್ಯದ ಹೋರಾಟದ ಜೀವನವು ದಾರಿದೀಪವಾಗಬೇಕು. ಹೆಣ್ಮಕ್ಕಳು ತಮ್ಮ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದೆಂದು ತೋರಿಸಿಕೊಟ್ಟ ದಿಟ್ಟ ಮಹಿಳೆ ಚನ್ನಮ್ಮನ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಣಿ ಚನ್ನಮ್ಮ ಕಮಿಟಿ ಹಾಗೂ ತಾಲ್ಲೂಕು ಪಂಚಮಸಾಲಿ ಸಮಾಜದಿಂದ ಶನಿವಾರ ಹಮ್ಮಿಕೊಂಡಿದ್ದ ಕಿತ್ತೂರ ಚನ್ನಮ್ಮ 247ನೇ ಜಯಂತ್ಯುತ್ಸವ, 201ನೇ ವಿಜಯೋತ್ಸವದ ಹಾಗೂ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನ ಕಂಚಿನ ಮೂರ್ತಿ ಅನಾವರಣ ಮತ್ತು ತಾಲ್ಲೂಕು ಸಮಾವೇಶದಲ್ಲಿ ಅವರು ಮಾತನಾಡಿದರು.
‘ರಾಣಿ ಚನ್ನಮ್ಮ ಒಬ್ಬ ಹೆಣ್ಣು ಮಗಳಾಗಿದ್ದರೂ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಟ ಮಾಡಿರುವುದು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ಸಂಗೊಳ್ಳಿ ರಾಯಣ್ಣನ ಪುತ್ರ ವಾತ್ಸಲ್ಯ ಮಾದರಿಯಾದರು. ಸಣ್ಣ ಊರಾದ ಮದಭಾಂವಿಯಲ್ಲಿ ಪಂಚಮಸಾಲಿ ಸಮಾಜದ ಸಂಘಟನೆ ಆಗುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದರು.
ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಧರೆಪ್ಪ ಸಾಂಗಲೀಕರ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಪವನ ಕತ್ತಿ, ಸಿದ್ದು ಕೊಣ್ಣೂರ, ಶ್ರೀಶೈಲ ಒಂಟಿ ಮಾತನಾಡಿದರು. ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಹೊಸದುರ್ಗದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಹಣಮಾಪುರದ ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ, ಅರ್ಚಕ ನಾಗಯ್ಯ ಮಠಪತಿ ಸಾನ್ನಿಧ್ಯ ವಹಿಸಿದ್ದರು.
ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲ ದಲಾಲ, ಸಿದ್ದು ಕೊಣ್ಣೂರ, ಮಹಾಂತೇಶ ಹಿಟ್ಟಿನಮಠ, ಅರ್ಜುನ ಹಲಗಿಗೌಡರ, ಮಹಾಂತೇಶ ಉರಬಿನವರ, ಸದಾಶಿವ ಪಟ್ಟಣಶೆಟ್ಟಿ, ಬಸವರಾಜ ನಾಗನೂರ, ನಿಂಗಪ್ಪ ಫೀರೋಜ, ಲಕ್ಕಪ್ಪ ಪಾಟೀಲ, ಚಂದ್ರಶೇಖರ ಆದಿಬಸಪ್ಪಗೋಳ, ಮಹಾದೇವ ಮಾರಾಪುರ, ಸಿದ್ದುಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ವಿದ್ಯಾಧರ ಸವದಿ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಸೀಮಿಲಕ್ಕಮ್ಮ ದೇವಸ್ಥಾನದಿಂದ ಚನ್ನಮ್ಮ ವೃತ್ತದ ವರೆಗೆ ಚನ್ನಮ್ಮನ ಭಾವಚಿತ್ರ ಹಾಗೂ ರಥದಲ್ಲಿ ಸ್ವಾಮೀಜಿಗಳ ಮೆರವಣಿಗೆ ನಡೆಯಿತು. ಮಹಿಳೆಯರಿಂದ ಪೂರ್ಣಕುಂಭ, ರೊಟ್ಟಿ ಬುತ್ತಿ, ಎತ್ತಿನ ಬಂಡಿ ಹಾಗೂ ಸಕಲ ವಾದ್ಯ ಮೇಳಗಳು ಮೆರವಣಿಗೆಗೆ ಕಳೆಕಟ್ಟಿದವು. ರನ್ನಬೆಳಗಲಿಯಿಂದ ಮದಭಾಂವಿವರೆಗೆ ಬೈಕ್ ರ‍್ಯಾಲಿ ಮೂಲಕ ಯತ್ನಾಳ ಅವರನ್ನು ಸ್ವಾಗತಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.