
ವೀರಣ್ಣ ಚರಂತಿಮಠ
ಬಾಗಲಕೋಟೆ: ಹಾನಗಲ್ ಕುಮಾರಸ್ವಾಮಿಗಳವರ 159ನೇ ಜಯಂತಿ, ಬಾಗಲಕೋಟೆಯ ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮಿಗಳ ರಜತ ಪುಣ್ಯಸ್ಮರಣೆ, ರೇವಣಸಿದ್ದ ಸ್ವಾಮಿಗಳ ದಶಮ ಪೂಣ್ಯಸ್ಮರಣೆ ಹಾಗೂ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಫೆ.5ರಿಂದ 8ರವರೆಗೆ ಚರಂತಿಮಠದ ಶಿವಾನುಭ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.5 ರಂದು ಬೆಳಿಗ್ಗೆ 8ಕ್ಕೆ ಗುರುಸಿದ್ಧ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 5.30ಕ್ಕೆ ಹಾನಗಲ್ ಕುಮಾರ ಸ್ವಾಮಿಗಳ ಜಯಂತಿ ಹಾಗೂ ಪುರಾಣ ಮಂಗಲ ಕಾರ್ಯಕ್ರಮ ನಡೆಯಲಿದೆ. ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.
ಫೆ.6ರಂದು ಬೆಳಿಗ್ಗೆ 10.30ಕ್ಕೆ ಧರ್ಮ ತತ್ವ ಚಿಂತನ ಗೋಷ್ಠಿ ನಡೆಯಲಿದ್ದು, ಚರಂತಿಮಠದ ಪ್ರಭು ಸ್ವಾಮೀಜಿ, ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಭೋವಿ ಗುರುಪಿಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಲ್ಲಿಕಾರ್ಜುನ ಶಿವಾಚಾರ್ಯರು, ಶಿವಯೋಗಿ ದೇವರು, ಜಿ.ಕೆ. ಹಿರೇಮಠ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಫೆ.6ರಂದು ಸಂಜೆ 5.30ಕ್ಕೆ ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮಿಗಳ ರಜತ ಪುಣ್ಯಸ್ಮರಣೆ, ರೇವಣಸಿದ್ದ ಸ್ವಾಮಿಗಳ ದಶಮ ಪುಣ್ಯಸ್ಮರಣೆಯ ಗುರುಸ್ಮರಣೆ ನಡೆಯಲಿದೆ. ಶಿವಮೊಗ್ಗದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಜೀನಿ ಸಾನ್ನಿಧ್ಯ ವಹಿಸಲಿದ್ದಾರೆ. ದಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕನ್ನಡ ಪ್ರಾಧ್ಯಾಪಕ ಎಸ್.ಡಿ. ಕೆಂಗಲಗುತ್ತಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಫೆ.7ರಂದು ಬೆಳಿಗ್ಗೆ 8ಕ್ಕೆ ಕೆರೂರ ಚರಂತಿಮಠದ ಶಿವಕುಮಾರ ಶಿವಾಚಾರ್ಯರು ಅಯ್ಯಾಚಾರ, ಲಿಂಗದೀಕ್ಷೆ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಸಮಾಜ ಚಿಂತನ ಗೋಷ್ಠಿ ನಡೆಯಲಿದ್ದು, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೊಟ್ಟೂರೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ನಂದೀಶ ಹಂಜೆ, ನಿವೃತ್ತ ಪ್ರಾಧ್ಯಾಪಕ ಮೃತ್ಯುಂಜಯ ರುಮಾಲೆ, ಸಾಹಿತಿ ವಿಜಯಕುಮಾರ ಕಟಗಿಹಳ್ಳಿ ಮಠ ಉಪನ್ಯಾಸ ನೀಡಲಿದ್ದಾರೆ.
ಫೆ.7ರಂದು ಸಂಜೆ 5.30ಕ್ಕೆ ಸಂಸ್ಕೃತಿ ಚಿಂತನ ಗೋಷ್ಠಿ ನಡೆಯಲಿದ್ದು, ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ದಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಗುರುದೇವಿ ಹುಲೆಪ್ಪನವರಮಠ, ಸುನಂದಾ ಎಮ್ಮಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಫೆ.8ರಂದು ಬೆಳಿಗ್ಗೆ ಕಲಬುರಗಿಯ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಅವರಿಂದ ಮಲ್ಲಿಕಾರ್ಜುನ ದೇಶಿಕರ ಅವರಿಗೆ ಬ್ರಹ್ಮೋಪದೇಶ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಶೂನ್ಯಪೀಠಾರೋಹಣ ನಡೆಯಲಿದ್ದು, ವಿವಿಧ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಬೆಳಿಗ್ಗೆ 11ಕ್ಕೆ ಬೀಳೂರು ಅಜ್ಜನವರ ದೇವಸ್ಥಾನದಿಂದ ಶಿವಾನುಭವ ಮಂಟಪದವರೆಗೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದರು.
ಫೆ.4ರಂದು ಮಧ್ಯಾಹ್ನ 4ಕ್ಕೆ ಹಾನಗಲ್ ಕುಮಾರಸ್ವಾಮೀಜಿ ಅವರ ಕುರಿತ ‘ವಿರಾಟಪುರದ ವಿರಾಗಿ’ ಚಲನಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಪಟ್ಟಾಧಿಕಾರಿ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯ ಮಹಾಸಭಾ ಜಿಲ್ಲಾ ಅಧ್ಯಕ್ಷ ಜಿ.ಎನ್. ಪಾಟೀಲ, ಮಹೋತ್ಸವ ಸಮಿತಿ ಉಪ ಕಾರ್ಯಾಧ್ಯಕ್ಷ ಮಹೇಶ ಅಥಣಿ ಉಪಸ್ಥಿತರಿರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.