ಬೀಳಗಿ: ರಾಷ್ಟ್ರೀಯ ಪಕ್ಷಗಳಿಂದ ನಮಗೆ ನ್ಯಾಯ ಸಿಗುವುದಿಲ್ಲ. ಆದ್ದರಿಂದ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಆದರೆ ಇದನ್ನು ಒಬ್ಬನೇ ತೀರ್ಮಾನಿಸುವ ಕೆಲಸವಲ್ಲ. ಸಮಾನ ಮನಸ್ಕರು ಒಂದೆಡೆ ಸೇರಿ ಪರಸ್ಪರ ಚರ್ಚಿಸಿ ತೀರ್ಮಾನಿಸುವ ಅಗತ್ಯವಿದೆ ಎಂದು ಚಲನಚಿತ್ರ ನಟ ಚೇತನ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘಟನೆಗಳು ಬೇರೆ, ಬೇರೆಯಾದರೂ ಒಂದೇ ಸಿದ್ಧಾಂತದಲ್ಲಿ ಚಳವಳಿಗಳ ಮೂಲಕ ಜೊತೆ, ಜೊತೆಗೆ ಸಾಗಬೇಕು ಎಂಬ ಉದ್ಧೇಶದಿಂದ ನಾನು ರಾಜ್ಯದಾದ್ಯಂತ ಸಂಚರಿಸಿ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಚರ್ಚಿಸುವ ಉದ್ದೇಶದಿಂದ ಪ್ರವಾಸ ಮಾಡುತ್ತಿರುವೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಒಳಮೀಸಲಾತಿ ನೀಡುವ ಮೂಲಕ ಸರ್ಕಾರ ನ್ಯಾಯ ಒದಗಿಸಬೇಕು. ಆದರೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವಲ್ಲಿ ಮೀನಮೇಷ ಎಣಿಸುತ್ತ, ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತ್ಯೇಕ ರಾಜ್ಯದಿಂದ ಉತ್ತರ ಕರ್ನಾಟಕ್ಕೆ ಯಾವುದೇ ಲಾಭವಿಲ್ಲ. ಯಾಕೆಂದರೆ ಇಲ್ಲಿರುವ ರಾಜಕಾರಣಿಗಳ ಇಚ್ಛಾಸಕ್ತಿ, ಧೈರ್ಯದ ಕೊರತೆಯಿಂದ ಈ ಭಾಗ ಹಿಂದುಳಿಯಲು ಕಾರಣವಾಗಿದೆ. ಉತ್ತರ ಕರ್ನಾಟಕಕ್ಕೆ ಹೆಚ್ಚು ವಂಚನೆಯಾಗಿದ್ದರಿಂದ ಮೊದಲು ಇಲ್ಲಿ ಪ್ರವಾಸ ಮಾಡಿ ಜನರನ್ನು ಜಾಗೃತಿಗೊಳಿಸುವುದಾಗಿ ಹೇಳಿದರು.
ಬಸವರಾಜ ಹಳ್ಳದಮನಿ, ಶಿವಾನಂದ ಚಲವಾದಿ, ಪ್ರವೀಣ ಗಲಗಲಿ, ಹನುಮಂತ ಗಚ್ಚಿನಮನಿ, ರಂಗಪ್ಪ ಕೋಟಿ, ಸಿದ್ದು ಮಾದರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.