ADVERTISEMENT

ಬಾಲ ಮಂದಿರದ ಮಕ್ಕಳ ಅಭಿವೃದ್ಧಿಗೆ ಶ್ರಮಿಸಿ: ಚಂದ್ರಶೇಖರ ದಿಡ್ಡಿ ಸಲಹೆ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:46 IST
Last Updated 2 ಸೆಪ್ಟೆಂಬರ್ 2025, 2:46 IST
ಬಾಗಲಕೋಟೆಯಲ್ಲಿ ಜರುಗಿದ ಬಾಲ ಮಂದಿರದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಕುರಿತ ಸಮಾಲೋಚನಾ ಸಭೆಯನ್ನು ಬಾಲ ಮಂದಿರದ ಮಕ್ಕಳು ಉದ್ಘಾಟಿಸಿದರು
ಬಾಗಲಕೋಟೆಯಲ್ಲಿ ಜರುಗಿದ ಬಾಲ ಮಂದಿರದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಕುರಿತ ಸಮಾಲೋಚನಾ ಸಭೆಯನ್ನು ಬಾಲ ಮಂದಿರದ ಮಕ್ಕಳು ಉದ್ಘಾಟಿಸಿದರು   

ಬಾಗಲಕೋಟೆ: ಬಾಲ ಮಂದಿರದ ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬೆರೆಯುವಂತೆ ಮಾಡುವ ಮೂಲಕ ಅವರ ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ಬಾಲಕರ, ಬಾಲಕಿಯರ ಬಾಲ ಮಂದಿರ ಹಾಗೂ ಮಕ್ಕಳ ಜಾಗೃತಿ ಸಂಸ್ಥೆ ಸಹಯೋಗದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಕುರಿತು ನಡೆದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಮಗುವಿನಲ್ಲೂ ಒಂದೊಂದು ಪ್ರತಿಭೆ, ಕಲೆ, ಕೌಶಲ ಹಾಗೂ ನೈಪುಣ್ಯ ಇರುತ್ತದೆ. ಅದನ್ನು ಗುರುತಿಸಿ ಅವರು ಸಮಾಜದಲ್ಲಿ ಉತ್ತಮವಾಗಿ ಬೆಳೆಯುವಂತೆ ಮಾಡಬೇಕು. ಪ್ರತಿ ತಿಂಗಳು ಬಾಲ ಮಂದಿರಗಳಿಗೆ ಭೇಟಿ ಮಾಡಿದಾಗ ಮಕ್ಕಳಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ಅದೇ ರೀತಿ ಇನ್ನೂ ಹೆಚ್ಚು ಕಾರ್ಯಗಳು ನಡೆಯಲಿ’ ಎಂದು ದಿಡ್ಡಿ ಆಶಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಮಕ್ಕಳು ತಮಗೆ ದೊರೆಯಬೇಕಾದ ಸೌಲಭ್ಯ ಪಡೆಯುವ ಮೂಲಕ ಧೈರ್ಯ, ಛಲದಿಂದ ಬದುಕು ಕಟ್ಟಿಕೊಳ್ಳಬೇಕು. ಜಿಲ್ಲಾ ಆಡಳಿತ ಪ್ರತಿ ಹಂತದಲ್ಲಿಯೂ ಬಾಲಮಂದಿರದ ಮಕ್ಕಳ ಜೊತೆಗೆ ಇರುತ್ತದೆ. ಅಗತ್ಯ ಸೌಲಭ್ಯ ಪಡೆಯಲು ಹೆದರಬೇಕಿಲ್ಲ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ‘ಬಾಲಮಂದಿರದಲ್ಲಿರುವ ಮಕ್ಕಳಲ್ಲಿ ವಿವಿಧ ಪ್ರತಿಭೆಯಿದ್ದು, ಆ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಸಿಬ್ಬಂದಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಕ ಪ್ರಭಾಕರ ಕೆ. ಮಾತನಾಡಿ, ‘ಇಲಾಖೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಕಾಳಜಿ ವಹಿಸಲಿದೆ’ ಎಂದರು.

ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಕೇಂದ್ರಿತ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಬೆಂಗಳೂರು ಮಕ್ಕಳ ಜಾಗೃತಿ ಸಂಸ್ಥೆಯ ಪ್ರೀತಿ, ಜಿಲ್ಲಾ ಆರೋಗ್ಯ ಇಲಾಖೆಯ ಶಿವನಗೌಡ ಪಾಟೀಲ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಸಿದ್ದನಗೌಡ ಅರಸಿಕೆರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.