
ಬಾದಾಮಿ (ಬಾಗಲಕೋಟೆ): ವಾಸ್ತುಶಿಲ್ಪದ ಪರಿಚಯ ಯುವಕರಿಗೆ ಆಗಬೇಕು ಎನ್ನುವ ಕಾರಣಕ್ಕೆ ಉತ್ಸವ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯ ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ‘ಚಾಲುಕ್ಯ ಉತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾದಾಮಿ. ಐಹೊಳೆ, ಪಟ್ಟದಕಲ್ಲು ನೋಡಲು ದೇಶ, ವಿದೇಶಗಳಿಂದ ಜನರು ಬರುತ್ತಾರೆ. ಚಾಲುಕ್ಯರು ಎಲ್ಲ ಧರ್ಮಗಳ ಸಮನ್ವಯಕರಾಗಿದ್ದರು. ಅವರಂತೆಯೇ ಎಲ್ಲ ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
₹2 ಸಾವಿರ ಕೋಟಿಯನ್ನು ಬಾದಾಮಿ ಅಭಿವೃದ್ಧಿಗೆ ನೀಡಲಾಗಿದೆ. ಬಾದಾಮಿ ಕ್ಷೇತ್ರದ ಅಭಿವೃದ್ಧಿಯನ್ನು ನಾನೂ ಶಾಸಕನಾಗಿದ್ದಲೂ ಮಾಡಿದ್ದೆ. ₹1,400 ಕೋಟಿ ಅನುದಾನವನ್ನು ಕೆರೂರ ಏತ ನೀರಾವರಿ ಯೋಜನೆಗೆ ನೀಡಲಾಗಿದೆ. ಬಾದಾಮಿ, ಕೆರೂರ ಸೇರಿದಂತೆ 27 ಗ್ರಾಮಗಳ ಕುಡಿಯುವ ನೀರಿಗೆ ₹420 ಕೋಟಿ, ರಸ್ತೆಗಳ ಅಭಿವೃದ್ಧಿಗೆ ₹50 ಕೋಟಿ ನೀಡಲಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ ಎಂದು ಹೇಳಿದರು.
ಉತ್ಸವಕ್ಕೆ ₹3 ಕೋಟಿ ಅನುದಾನ ನೀಡಿದ್ದೆ. ಸಾಲುವುದಿಲ್ಲ ಎಂದಿದ್ದರಿಂದ ಇನ್ನೂ ₹1 ಕೋಟಿ ಬಿಡುಗಡೆ ಮಾಡುವೆ. ಇಮ್ಮಡಿ ಪುಲಿಕೇಶಿ ಪ್ರತಿಮೆಗೂ ಆರ್ಥಿಕ ನೆರವು ನೀಡಲಾಗುವುದು ಎಂದರು.
ಸಂಸದ ಗದ್ದಿಗೌಡರ ಹೇಳಿರುವುದರಿಂದ ನೆರವಿಗಾಗಿ ಕೇಂದ್ರಕ್ಕೆ ಮನವಿ ನೀಡಲಾಗುವುದು. ಅನುದಾನ ಕೊಡಿಸುವುದು ನಿಮ್ಮ ಜವಾಬ್ದಾರಿ. ಹಲವಾರು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಅವರು ಸ್ಪಂದಿಸದ್ದರಿಂದ ಮನವಿ ನೀಡಲು ಹೋಗಿರಲಿಲ್ಲ. ಈಗ ಅವರೇ ಹೇಳಿರುವುದರಿಂದ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಚಾಮುಂಡಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿದ್ದರು. ಬಾದಾಮಿಯ ಜನ ಗೆಲ್ಲಿಸಿದ್ದರು. ಅದರಿಂದಾಗಿಯೇ ಇಂದು ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ನಿಮ್ಮ ಉಪಕಾರವನ್ನು ಎಂದಿಗೂ ಕೂಡ ಮರೆಯುವುದಿಲ್ಲ. ನೋವಿನ ಸಂಗತಿ ಎಂದರೆ ಚಾಲುಕ್ಯ ಉತ್ಸವ ನಡೆಯಲಿಲ್ಲ, ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆಯಾಗಲಿಲ್ಲ ಎಂಬ ಕೊರಗಿತ್ತು. ಈಗ ಅವೆರಡೂ ಈಡೇರಿವೆ ಎಂದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲುಕ್ಯ ಉತ್ಸವ ಆಯೋಜಿಸುವ ಮೂಲಕ ಬಹಳ ದೊಡ್ಡ ಅವಕಾಶ ಒದಗಿಸಿಕೊಟ್ಟಿದ್ದಾರೆ. ದೇಶವೇ ಚರ್ಚೆ ಮಾಡುವಂತಹ ನಾಯಕತ್ವ ಹೊಂದಿದ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಎಂದರು.
ಪಲ್ಲವ, ಹರ್ಷವರ್ಧನ ರಾಜರನ್ನು ಸೋಲಿಸಿದ ಕೀರ್ತಿ ಇಮ್ಮಡಿ ಪುಲಕೇಶಿ ಅವರದ್ದಾಗಿದೆ. ಬಾದಾಮಿಗೆ ನೀರು ಒದಗಿಸುವ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ನೆರವು ನೀಡಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಬೇಕಿದೆ. ಜನರ ಸ್ಥಳಾಂತರಕ್ಕೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದರು.
ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪಿಸಬೇಕು ಎಂಬುದು ಎರಡು ದಶಕಗಳ ಆಗ್ರಹವಾಗಿತ್ತು. ಹೋರಾಟಗಳೂ ನಡೆದಿದ್ದವು. ಮೂರ್ತಿ ಪ್ರತಿಷ್ಠಾಪನೆ ಕಾಮಗಾರಿಗೆ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೀಡಲಾಗಿದೆ. ಬಹುವರ್ಷಗಳ ಕನಸು ನನಸಾಗಲಿದೆ ಎಂದು ಹೇಳಿದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಇಮ್ಮಡಿ ಪುಲಿಕೇಶಿ ಮೂರ್ತಿ ತಯಾರಿಸಿ ಬಹಳ ವರ್ಷಗಳಾಗಿದ್ದರೂ ಪ್ರತಿಷ್ಠಾಪನೆಯಾಗಿಲ್ಲ. ಹೃದಯ ಯೋಜನೆ ಕುಂಟುತ್ತಾ ಸಾಗಿದೆ. ಸ್ಥಳೀಯರ ಸಹಕಾರ ನೀಡದಿರುವುದು ಸಹ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಜೆಟ್‌ನಲ್ಲಿಯೇ ಚಾಲುಕ್ಯ ಉತ್ಸವಕ್ಕೆ ಅನುದಾನ ತೆಗೆದಿರಿಸಲಾಗಿತ್ತು. ಬಾಲ್ಯದಲ್ಲಿ ಉತ್ಸವ ನೋಡಲು ಬರುತ್ತಿದ್ದದ್ದೂ ಈಗಲೂ ನೆನಪಿದೆ. 11 ವರ್ಷಗಳ ನಂತರ ಉತ್ಸವ ನಡೆಯುತ್ತಿದೆ. ಬಾದಾಮಿ ಮುಖ್ಯಮಂತ್ರಿಯಾಗಲು ಮರುಜೀವ ನೀಡಿದ ಜಿಲ್ಲೆಯಾಗಿದೆ ಎಂದು ಸಿದ್ದರಾಮಯ್ಯ ಸದಾ ಸ್ಮರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕನ್ನಡ, ಸಂಸ್ಕೃತಿ ಬೆಳವಣಿಗೆಗೆ ಬಹಳಷ್ಟು ದೊಡ್ಡ ಕೊಡುಗೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಹಲವು ಟ್ರಸ್ಟ್, ಪ್ರಾಧಿಕಾರಗಳಿಗೆ ಏಕಕಾಲಕ್ಕೆ ನೇಮಕ ಮಾಡಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ವಿಶ್ವವೇ ಬಾದಾಮಿಯನ್ನು ನೋಡುವಂತೆ ಮಾಡಿದವರು ಚಾಲುಕ್ಯರಾಗಿದ್ದಾರೆ. ಶಿಲ್ಪಕಲೆಯ ವೈಭವದ ನಾಡಾಗಿದೆ. ಉತ್ಸವ ಮಾಡಬೇಕು ಎನ್ನುವುದು ಸಿದ್ದರಾಮಯ್ಯ ಅವರ ಕಾಳಜಿಯೂ ಆಗಿತ್ತು ಎಂದು ಸ್ಮರಿಸಿಕೊಂಡರು.
ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರು. ಗ್ಯಾರಂಟಿಗಳ ಮೂಲಕ ಸ್ವಾಭಿಮಾನ ಬದುಕು ಕಟ್ಟಿಕೊಟ್ಟಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜು
ಸಚಿವ ಭೈರತಿ ಸುರೇಶ, ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಹಣಮಂತ ನಿರಾಣಿ, ಉಮಾಶ್ರೀ, ಎಸ್.ಜಿ. ನಂಜಯ್ಯನಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.