ADVERTISEMENT

ಬಾಗಲಕೋಟೆ: ಚಳಿ.. ಚಳಿ.. ಗಡಗಡ ನಡುಗುತ್ತಿರುವ ಜನತೆ

ಬಸವರಾಜ ಹವಾಲ್ದಾರ
Published 18 ಡಿಸೆಂಬರ್ 2024, 7:13 IST
Last Updated 18 ಡಿಸೆಂಬರ್ 2024, 7:13 IST
   

ಬಾಗಲಕೋಟೆ: ಜಿಲ್ಲೆಯಾದ್ಯಂತ ಮೂರ್ನಾಲ್ಕು ದಿನಗಳಿಂದ ಚಳಿ ಹೆಚ್ಚಾಗಿದೆ. ಇಡೀ ದಿನ ಶೀತ ಗಾಳಿ ಬೀಸುತ್ತಿದೆ. ಮೈಕೊರೆಯುವ ಚಳಿಗೆ ಬೆಳಿಗ್ಗೆ, ಸಂಜೆ ಜನರ ಸಂಚಾರ ಕಡಿಮೆಯಾಗಿದೆ. ಕನಿಷ್ಠ ತಾಪಮಾನ 11  ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಚಳಿ ಹೆಚ್ಚಾಗಿರುವುದರ ‍ಪರಿಣಾಮ ಜನರ ಆರೋಗ್ಯದ ಮೇಲೆ ಆಗಲಿದೆ. ಜೊತೆಗೆ ಕೆಲವು ಬೆಳೆಗಳ ಮೇಲೆಯೂ ಆಗುವ ಸಾಧ್ಯತೆಗಳೂ ಇವೆ. ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ಉತ್ತಮ ಮಳೆಯಾಗಿರುವುದರಿಂದ ಚಳಿ ಹೆಚ್ಚಿರಬಹುದು ಎಂದು ಜನರು ಲೆಕ್ಕ ಹಾಕಿದ್ದರು. ಆರಂಭದಲ್ಲಿ ಚಳಿ ಶುರುವಾಗಿತ್ತು. ಅಷ್ಟರಲ್ಲಿಯೇ ಚಂಡ
ಮಾರುತ ಬಂದಿದ್ದರಿಂದ ಮಳೆಯಾಗಿ, ಬಿಸಿಲಿನ ಪ್ರಮಾಣ ಹೆಚ್ಚಾಗಿತ್ತು. ರಾತ್ರಿ ವೇಳೆಯೂ ಸೆಕೆಯಾಗಿತ್ತು.

ADVERTISEMENT

ಮೂರ್ನಾಲ್ಕು ದಿನಗಳಿಂದ ತಾಪ ಮಾನ ಕುಸಿದಿದೆ. ಜನರು ಚಳಿಯಿಂದ ಗಡ, ಗಡ ನಡುಗುತ್ತಿದ್ದಾರೆ. ಕೆಲವರು ಸ್ಟೆಟರ್‌, ರಗ್ಗ ಮೊರೆ ಹೋಗಿದ್ದರೆ, ಇನ್ನು ಕೆಲವರು ರಸ್ತೆಗಳಲ್ಲಿ ಬೆಂಕಿ ಕಾಯಿಸುತ್ತಿದ್ದಾರೆ. ನೆಗಡಿ, ಕೆಮ್ಮಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಬೆಳಿಗ್ಗೆ 8 ಗಂಟೆಯವರೆಗೂ ಮಂಜು ಕವಿದ ವಾತಾವರಣ ಸಾಮಾನ್ಯವಾಗಿದೆ. ಬೆಳಕಿನಲ್ಲಿಯೂ ವಾಹನಗಳ ಲೈಟ್‌ ಹೊತ್ತಿಸಿಕೊಂಡು ಸಂಚರಿಸಬೇಕಾಗಿದೆ. ರಾತ್ರಿಯೂ ಮಂಜು ಕವಿದಿರುತ್ತದೆ. ಬೆಳಿಗ್ಗೆ ವಾಕಿಂಗ್‌ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ವಾಹನಗಳ ಮೇಲೆ ಸಂಚರಿಸುವವರು ಸ್ವೆಟರ್, ಜರ್ಕಿನ್‌ ಹಾಕಿಕೊಂಡು, ಕಿವಿಗೆ ಕ್ಯಾಪ್‌ ಧರಿಸಿಕೊಂಡು ಸಂಚರಿಸುತ್ತಿದ್ದಾರೆ.

'ಆರೋಗ್ಯ: ಮುನ್ನೆಚ್ಚರಿಕೆ ತೆಗೆದುಕೊಳ್ಳಿ’

ಬಾಗಲಕೋಟೆ: ಚಳಿ ಹೆಚ್ಚಾಗುತ್ತಿರುವುದರಿಂದ ಸಣ್ಣ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ವಯಸ್ಸಾದವರು ಆರೋಗ್ಯದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಪ್ರಕಾಶ ಬಿರಾದಾರ. ವಯಸ್ಸಾದವರು, ಗರ್ಭಿಣಿಯವರು ಬೆಚ್ಚಗಿರುವ ಬಟ್ಟೆ ಧರಿಸಬೇಕು. ಬೆಳಿಗ್ಗೆ, ಸಂಜೆ ಚಳಿ ಸಮಯದಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸಬೇಕು. ಕೆಮ್ಮು, ನೆಗಡಿ ಬಂದರೆ ಕೂಡಲೇ ಚಿಕಿತ್ಸೆ ಪಡೆಯಬೇಕು. ಕಿಟಕಿ, ಬಾಗಿಲು ಮುಚ್ಚಿಕೊಂಡು ಕೊಠಡಿ ವಾತಾವರಣ ಬೆಚ್ಚಗಿಡಬೇಕು ಎಂದು ಹೇಳಿದರು.

ಬೆಳೆ ರಕ್ಷಣೆಗೆ ಮುಂದಾಗಿ: ರೈತರಿಗೆ ಸಲಹೆ

ಬಾಗಲಕೋಟೆ: ಮುಂದಿನ ಮೂರು ದಿನಗಳವರೆಗೆ ಶೀತಗಾಳಿ ಮುಂದುವರೆಯುವುದರಿಂದ ರೈತರು ಕೆಲವು ಕ್ರಮಕೈಗೊಳ್ಳಬೇಕಾಗಿದೆ.

ಕಡಲೆ ಬೆಳೆ ಕಡಿಮೆ ಹೂ ಕಟ್ಟಬಹುದು. ಅದಕ್ಕೆ ಸಂಜೆ ಸ್ವಲ್ಪ ನೀರಿನ ಜತೆಗೆ ಮೇಲುಗೊಬ್ಬರವಾಗಿ ಯೂರಿಯಾ ನೀಡಬೇಕು. ಗೋಧಿ ಬೆಳವಣಿಗೆಗೆ ಸಂಜೆ ಸ್ವಲ್ವ ನೀರು ನೀಡಬೇಕು. ಬಾಳೆ ಹಣ್ಣು ಸೀಳುವಿಕೆ ತಡೆಯಲು ಬಾಳೆ ಗೊನೆಗಳನ್ನು ಫಾಲಿಥಿನ್ ಚೀಲದಿಂದ ಮುಚ್ಚಬೇಕು. ದ್ರಾಕ್ಷಿ ಹಣ್ಣು  ಸೀಳುವಿಕೆ ತಡೆಯಲು ಸ್ವಲ್ಪ ನೀರು ಬಿಡುವುದರ ಜೊತೆಗೆ ಹಣ್ಣು ಬಿಡುವ ಗಿಡಗಳನ್ನು ಫಾಲಿಥಿನ್, ಗೋಣಿ ಚೀಲಗಳಿಂದ ಮುಚ್ಚಬೇಕು. ಕುರಿ ಮತ್ತು ಆಡುಗಳಿಗೆ ಬೆಳೆದು ನಿಂತ ಮಂಜು ಬಿದ್ದಿರುವ ಎಳೆ ಹುಲ್ಲನ್ನು ಮೇಯಿಸಬಾರದು. ಇದರಿಂದ ಕರುಳು ಬೇನೆ ರೋಗದ ಸಾಧ್ಯತೆ ಇರುತ್ತದೆ. ಕೋಳಿ ಮನೆಗಳಲ್ಲಿ ಪ್ಲೋರೋಸೆಂಟ್ ವಿದ್ಯುತ್ ಬಲ್ಬ್‌ಅಳವಡಿಸಿಕೊಳ್ಳಬೇಕು ಎಂದು ಕೆವಿಕೆ ಹವಾಮಾನ ತಜ್ಞ ಬಸವರಾಜ ನಾಗಲೀಕರ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.