ತೇರದಾಳ: ‘ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಿದರೆ ಮಾತ್ರ ಅದಕ್ಕೊಂದು ಬೆಲೆ. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅನ್ನು ಕೋಮು ಸೌಹಾರ್ದದಿಂದ ಆಚರಿಸುವ ಮೂಲಕ ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕು’ ಎಂದು ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಜರುಗಿದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಹಬ್ಬ ಆಚರಣೆಯಲ್ಲಿ ಸಡಗರ– ಸಂಭ್ರಮವಿರಲಿ. ಸಂಬಂಧಗಳು ಕೆಡುವಂತಹ ಸಂಘರ್ಷಗಳು ಬೇಡ. ಚಿಕ್ಕ– ಪುಟ್ಟ ವಿಷಯಗಳಿಗೆ ತಕರಾರು ಮಾಡಿಕೊಳ್ಳದೆ ನಾವೆಲ್ಲರೂ ಒಂದು ಎಂಬ ಭಾವದಿಂದ ಇರಬೇಕು’ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಫ್.ಬಿ. ಗಿಡ್ಡಿ ಮಾತನಾಡಿ, ‘ಬಸ್ ನಿಲ್ದಾಣದ ಬಳಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿಯೇ ಪಟಾಕಿ ಅಂಗಡಿಗಳನ್ನು ಹಾಕಿಸಲಾಗುವುದು. ಗಣೇಶ ವಿಸರ್ಜನೆಗೂ ಪ್ರತಿ ವರ್ಷದಂತೆ ಹೊಂಡವನ್ನು ಮಾಡಲಾಗುತ್ತದೆ. ಪರಿಸರ ರಕ್ಷಣೆ ಹಾಗೂ ಸಂರಕ್ಷಣೆಗೆ ಎಲ್ಲರೂ ಗಮನ ಕೊಡಬೇಕು’ ಎಂದರು.
ಪಿಎಸ್ಐ ಶಿವಾನಂದ ಸಿಂಗನ್ನವರ, ‘ಠಾಣೆ ವ್ಯಾಪ್ತಿಯಲ್ಲಿ ಸುಮಾರು 122 ಸ್ಥಳಗಳಲ್ಲಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತವೆ. ಸುಮಾರು 3– 4 ಮುಸಲ್ಮಾನ್ ಕಮಿಟಿಯವರಿಂದ ಈದ್ ಮಿಲಾದ್ ಅಂಗವಾಗಿ ವೇದಿಕೆ ಹಾಗೂ ಮೆರವಣಿಗೆ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ನಿಯಮಗಳನ್ನು ಪಾಲಿಸಿ, ಸೌಹಾರ್ದದಿಂದ ಆಚರಿಸಬೇಕು. 16 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತೇವೆ’ ಎಂದರು.
ಹೆಸ್ಕಾಂ ಎಸ್ಒ ಬಸವರಾಜ ಬಿರಾದಾರ ಮಾತನಾಡಿದರು. ಮುಖಂಡರಾದ ಹಣಮಂತ ರೋಡಕರ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಅಮ್ಜದ್ಖಾನ್ ಇನಾಮ್ದಾರ, ಎಎಸ್ಐ ಎಂ.ಎಂ. ಗುಂಜಟ್ಟಿ, ಪುರಸಭೆ ಸದಸ್ಯರು, ಹಾಗೂ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.