ಬೀಳಗಿ: ಹಡಪದ ಅಪ್ಪಣ್ಣ ಸಮಾಜ ಬಾಂಧವರು ಸಮಾಜದ ಕಾರ್ಯಚಟುವಟಿಕೆಗಳಿಗಾಗಿ ಸಮುದಾಯ ಭವನ ನಿರ್ಮಿಸುವ ಉದ್ದೇಶ ಹೊಂದಿದ್ದು, ಇದಕ್ಕೆ₹20 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಇಲ್ಲಿನ ಬಸವೇಶ್ವರ ದೇವಾಲಯದ ಸಭಾಭವನದಲ್ಲಿ ಗುರುವಾರ ನಿಜಶರಣ ಹಡಪದ ಅಪ್ಪಣ್ಣ ಇವರ 891 ನೇ ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರಂತರ ದುಡಿಮೆ ಕಾಯಕ ಮಾಡುವ ಹಡಪದ ಅಪ್ಪಣ್ಣ ಸಮಾಜ, ನಿತ್ಯ ಕ್ಷೌರಿಕ ವೃತ್ತಿ ಮಾಡಿ ಜೀವನ ಸಾಗಿಸುವರು. ಈ ಸಮಾಜದ ಬಹುತೇಕ ಕುಟುಂಬಗಳಲ್ಲಿ ಜಮೀನು ಇಲ್ಲದೆ ಜೀವನ ಸಾಗಿಸುತ್ತಿರುವರು.ಇಂತಹ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯ ನೀಡಲಾಗುವುದು ಜೊತೆಗೆ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮದ ಕುರಿತಾಗಿ ಚರ್ಚಿಸಿ ನಿಗಮಕ್ಕೆ ಹಣಕಾಸು ಮಂಜೂರು ಆಗುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಸಮಾಜ ಬಾಂಧವರು ಶ್ರಮ ಜೀವಿಗಳಾಗಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮತ್ತು ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ನ್ಯಾಯವಾದಿ ರಾಜು ಜಡ್ರಾಮಕುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಗಂಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾವಿತ್ರಿ ಶರಣಮ್ಮನವರು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ , ವಿನಯ ತಿಮ್ಮಾಪೂರ, ಮುತ್ತು ಬೋಜಿ೯, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರವೀಣ ಪಾಟೀಲ, ಸಿಪಿಐ ಎಚ್. ಬಿ. ಸನಮನಿ, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಹಣಮಂತ ಕಾಖಂಡಕಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಹೊಳಬಸು ಬಾಳಶೆಟ್ಟಿ, ಡಿಎಸ್ ಎಸ್ ಬೆಳಗಾವಿ ವಿಭಾಗೀಯ ಅಧ್ಯಕ್ಷ ಮಹಾದೇವ ಹಾದಿಮನಿ, ಪ.ಪಂ ಸದಸ್ಯ ಸಂತೋಷ ನಿಂಬಾಳಕರ, ಎಚ್.ಡಿ. ವೈದ್ಯ, ಮಲ್ಲಿಕಾರ್ಜುನ ಹಡಪದ, ರವಿ ಕೋಲಾರ, ನಾಗರಾಜ ಹಡಪದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.