ಮುಧೋಳ: ‘ಸಚಿವ ಆರ್.ಬಿ.ತಿಮ್ಮಾಪುರ ಜನಪರ ಕಾಳಜಿಯುಳ್ಳ ನಾಯಕ. ಇಂಥವರನ್ನು ಶಾಸಕರನ್ನಾಗಿ ಪಡೆದ ಮುಧೋಳ ಜನತೆ ಭಾಗ್ಯವಂತರು’ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಆಯೋಜಿಸಿದ ಸಚಿವ ಆರ್.ಬಿ.ತಿಮ್ಮಾಪುರ ಅವರ 64ನೇ ಜನ್ಮದಿನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘2018ರಲ್ಲಿ ತಿಮ್ಮಾಪುರ ಅವರಿಗೆ ಟಿಕೆಟ್ ನೀಡದ ಕಾರಣ ನಮಗೆ ಸೋಲಾಯಿತು. ಮುಂದೆ ಹಾಗಾಗದಂತೆ ಹೈಕಮಾಂಡಗೆ ಮನವರಿಕೆ ಮಾಡಿಕೊಡಲಾಯಿತು’ ಎಂದರು.
‘ಒಳ ಮೀಸಲಾತಿ ಜಾರಿ ಮಾಡುವಂತೆ ತಿಮ್ಮಾಪುರ ಅವರು ಸರ್ಕಾರಕ್ಕೆ ಒತ್ತಡ ಹಾಕಿ ಜಾರಿ ಮಾಡುವಂತೆ ಮಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಸಭೆ ನಡೆದಾಗ ರೈತರ ಪರ ಧ್ವನಿ ಎತ್ತಿದರು. ರೈತರಿಗೆ ಮೊದಲು ಆದ್ಯತೆ ನೀಡಿ ಪ್ರತಿ ಎಕರೆಗೆ ₹40ರಿಂದ ₹50 ಲಕ್ಷ ನೀಡುವಂತೆ ಒತ್ತಾಯಿಸಿದರು. ಇವರ ರೈತರ ಪರ ಕಾಳಜಿ ಅಪಾರ’ ಎಂದು ಹೇಳಿದರು.
ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ‘ನನ್ನ ಈ ಸ್ಥಾನಕ್ಕೆ ಜನರೇ ಶಕ್ತಿ. ಜನರ ಸೇವೆಗೆ ಸದಾ ಸಿದ್ಧ. ಸಿದ್ದರಾಮಯ್ಯ ಅವರ ಬಡವರ ಪರ ಗ್ಯಾರಂಟಿ ಯೋಜನೆಯಿಂದ ಬಡ ಜನರಿಗೆ ಬಹಳ ಅನೂಕೂಲವಾಗಿದೆ. ನಾನು ಸೋತಾಗ ಕರೆದು ನನ್ನನ್ನು ಎಂಎಲ್‍ಸಿ ಮಾಡಿ ಸಚಿವರನ್ನಾಗಿ ಮಾಡಿದ್ದು ಸಿದ್ದರಾಮಯ್ಯನವರು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು’ ಎಂದರು.
‘ಚುನಾವಣಾ ಪೂರ್ವ ಹೇಳಿದಂತೆ ಹಂತವಾಗಿ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ. ಮುಧೋಳ ನಗರದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ಚಾಲನೆ ನೀಡಲಾಗುವುದು’ ಎಂದರು.
ತಿಮ್ಮಾಪುರ ತಮ್ಮ ಜನ್ಮದಿನದ ಅಂಗವಾಗಿ ಸ್ವಂತ ಗ್ರಾಮ ಉತ್ತೂರದ ತಮ್ಮ ನಿವಾಸದಲ್ಲಿ ಕಾರ್ಯಕರ್ತರೊಂದಿಗೆ ಗ್ರಾಮದ ಬಸಯ್ಯ ಅಜ್ಜನವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ನಗರದ ಗಣೇಶ ದೇವಸ್ಥಾನದಲ್ಲಿ, ಸದಾಶಿವ ಮಠದಲ್ಲಿ, ಸೈಯ್ಯದ ಸಾಬ ದರ್ಗಾದಲ್ಲಿ, ಗಾಂಧಿ ವೃತ್ತದಲ್ಲಿ ಇರುವ ಹನುಮಾನ ದೇವಸ್ಥಾನದಲ್ಲಿ, ಕಲ್ಮೇಶ್ವರ ದೇವಸ್ಥಾನದಲ್ಲಿ, ಹೆಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ತಾಲ್ಲೂಕಿನ ಎಲ್ಲ ದೇವಸ್ಥಾನ ಪೂಜಾರಿಗಳಿಗೆ, ಸ್ವಾಮೀಜಿಗಳಿಗೆ ಪಾದ ಪೂಜೆ ಕಾರ್ಯಕ್ರಮವನ್ನು ಕುಟುಂಬದ ಸದಸ್ಯರು ನೆರವೇರಿಸಿದರು. ಜನ್ಮದಿನದ ಅಂಗವಾಗಿ ನಡೆದ ಉದ್ಯೋಗ ಮೇಳ, ರಕ್ತದಾನ ಶಿಬಿರಕ್ಕೆ ತಿಮ್ಮಾಪುರ ಚಾಲನೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ, ಅಶೋಕ್ ಕಿವಡಿ, ರಾಘು ಮೊಕಾಶಿ, ಉದಯ ಸಾರವಾಡ, ಉದಯಸಿಂಹ ಪಡತಾಡೆ, ಸಂಗಪ್ಪ ಇಮ್ಮನವರ್, ಪರಮಾನಂದ ಕುಟ್ಟರಟ್ಟಿ, ಸುನಂದಾ ತೇಲಿ, ಟಿ.ವಿ.ಅರಳಿಕಟ್ಟಿ, ಮುದಕಪ್ಪ ಅಂಬಿ, ಸಂಜಯ ನಾಯಕ, ರಾಜುಗೌಡ ಪಾಟೀಲ, ಭೀಮಸಿ ಸರಕಾರಕುರಿ, ವಿನಯ ತಿಮ್ಮಾಪುರ, ಶಂಕರ ತಿಮ್ಮಾಪುರ, ಹಣಮಂತ ತಿಮ್ಮಾಪುರ ಚಿನ್ನು ಅಂಬಿ, ರಾಜು ಬಾಗವಾನ್ ಸೇರಿ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.