ADVERTISEMENT

ಇಳಕಲ್ | ಕಾಂಗ್ರೆಸ್‌ನಿಂದ ಮತಗಳವು: ಆರೋಪ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 6:28 IST
Last Updated 31 ಡಿಸೆಂಬರ್ 2025, 6:28 IST
ಇಳಕಲ್ ನಲ್ಲಿ ಸೋಮವಾರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮುರಡಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಅಪ್ರಾಪ್ತ ವಯಸ್ಕರನ್ನು ಮತದಾರರ ಪಟ್ಟಿಗೆ ಸೇರಿಸಿದ್ದಾರೆ ಎಂದು ಆರೋಪಿಸಿ ದಾಖಲೆಗಳನ್ನು ಪ್ರದರ್ಶಿಸಿದರು.
ಇಳಕಲ್ ನಲ್ಲಿ ಸೋಮವಾರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮುರಡಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಅಪ್ರಾಪ್ತ ವಯಸ್ಕರನ್ನು ಮತದಾರರ ಪಟ್ಟಿಗೆ ಸೇರಿಸಿದ್ದಾರೆ ಎಂದು ಆರೋಪಿಸಿ ದಾಖಲೆಗಳನ್ನು ಪ್ರದರ್ಶಿಸಿದರು.   

ಇಳಕಲ್: ‘ಹುನಗುಂದ ವಿಧಾನಸಭಾ ಕ್ಷೇತ್ರದ ಮುರಡಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಖೊಟ್ಟಿ ದಾಖಲೆಗಳ ಮೂಲಕ ಹಾಗೂ ಅಧಿಕಾರಿಗಳಿಗೆ ಒತ್ತಡ ಹಾಕಿ ಅಪ್ರಾಪ್ತ ವಯಸ್ಕರನ್ನು ಮತದಾರರ ಪಟ್ಟಿಗೆ ಸೇರಿಸಿ ವೋಟ್ ಚೋರಿ ಮಾಡಿದ್ದಾರೆ’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಕಾಂಗ್ರೆಸ್ ಮುಖಂಡರು ತಾವು ಮಾಡುವ ಅಕ್ರಮಗಳನ್ನು ಬೇರೆಯವರ ಮೇಲೆ ಹಾಕಿ ಗೂಬೆ ಕೂರಿಸುತ್ತಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ವೋಟ್ ಚೋರಿ ಮಾಡುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಓಡಾಡುತ್ತಿದ್ದಾರೆ. ಆದರೆ ಹುನಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ವೋಟ್ ಚೋರಿ ಮಾಡಿರುವುದಕ್ಕೆ ನಮ್ಮ ಪಕ್ಷದ ಮುಖಂಡ ಮಂಜುನಾಥ ಗೌಡರ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ’ ಎಂದರು.

‘ಶಾಸಕ ಕಾಶಪ್ಪನವರ ಕೂಡಲಸಂಗಮ ಪಿಕೆಪಿಎಸ್ ಸೇರಿದಂತೆ ಅನೇಕ ಪಿಕೆಪಿಎಸ್‌ಗಳ ಮತದಾರ ಪಟ್ಟಿಯಲ್ಲಿ ಅಕ್ರಮ ಮಾಡಿ ಗೆದ್ದಿದ್ದಾರೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಶಾಸಕರ ಒತ್ತಡ ಹಾಗೂ ಕುಮ್ಮಕ್ಕಿನಿಂದ ಅಧಿಕಾರಿಗಳು ಮುರಡಿ ಗ್ರಾಮದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳ ಹೆಸರುಗಳನ್ನು ಹಾಗೂ ಬೇರೆ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಇರುವ ಹೆಸರುಗಳನ್ನು ಮುರಡಿ ಗ್ರಾಮದ ಮತದಾರರ ಪಟ್ಟಿಯಲ್ಲಿಯೂ ಸೇರಿಸಿದ್ದಾರೆ’ ಎಂದು ಆರೋಪಿಸಿ, ದಾಖಲೆಗಳನ್ನು ಪ್ರದರ್ಶಿಸಿದರು.

‘ಈ ವಿಷಯಕ್ಕೆ ಸಂಬಂಧಿಸಿ ಮತಗಟ್ಟೆ ಮಟ್ಟದ ಅಧಿಕಾರಿ (ಬಿ.ಎಲ್.ಒ) ತಾನು ಮತದಾರರ ಪಟ್ಟಿಯ ಈ ಸೇರ್ಪಡೆಗಳ ದಾಖಲೆಗಳನ್ನು ಪರಿಶೀಲಿಸಿಲ್ಲ ಹಾಗೂ ದೃಢೀಕರಿಸಿಲ್ಲ ಎಂದು ಹೇಳುತ್ತಾರೆ. ಯಾರದ್ದೋ ಒತ್ತಡಕ್ಕೆ ಮಣಿದು ತಹಶೀಲ್ದಾರ್ ಕಚೇರಿ ಹಂತದಲ್ಲಿ ಅಕ್ರಮ ಎಸಗಲಾಗಿದೆ. ಅಧಿಕಾರಿಗಳು ನಿಯಮ ಮೀರಿ ಒತ್ತಡಕ್ಕೆ ಮಣಿದು ಕೆಲಸ ಮಾಡಬಾರದು. ಮಾಡಿದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಚ್ಚರಿಸಿದರು.

‘ಈ ಮತಗಳವಿನ ಬಗ್ಗೆ ದಾಖಲೆಗಳೊಂದಿಗೆ ಬುಧವಾರ ಜಿಲ್ಲಾಧಿಕಾರಿಗೆ ಪಕ್ಷದ ವತಿಯಿಂದ ಮತ್ತೊಮ್ಮೆ ದೂರು ನೀಡಲಾಗುವುದು’ ಎಂದರು.

‘ಬಿಜೆಪಿ ಕಾರ್ಯಕರ್ತರು, ಮುಖಂಡರು ತಮ್ಮ ಗ್ರಾಮಗಳ ಮತದಾರರ ಪಟ್ಟಿಯ ಮೇಲೆ ನಿಗಾ ಇಟ್ಟು, ಕಾಂಗ್ರೆಸ್ ಮಾಡುವ ಮತಗಳವು ತಡೆಯಲು ಹಾಗೂ ಅಕ್ರಮಗಳು ಕಂಡು ಬಂದರೆ ಮಾಹಿತಿ ನೀಡಲು ತಿಳಿಸಿದ್ದೇನೆ’ ಎಂದರು.

ಬಿಜೆಪಿ ಮುಖಂಡ ಮಹಾಂತಗೌಡ ಪಾಟೀಲ ತೊಂಡಿಹಾಳ, ಶೋಭಾ ಆಮದಿಹಾಳ, ಮಹಾಂತಪ್ಪ ಚನ್ನಿ, ಮಂಜುನಾಥ ಶೆಟ್ಟರ್, ಶ್ಯಾಮಸುಂದರ ಕರವಾ, ಮಂಜುನಾಥ ಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.