ADVERTISEMENT

ಈಗಿನ ಸದಸ್ಯರನ್ನೇ 6 ತಿಂಗಳು ಮುಂದುವರೆಸಿ, ಇಲ್ಲವೇ ಚುನಾವಣೆ ನಡೆಸಿ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 27 ಮೇ 2020, 14:26 IST
Last Updated 27 ಮೇ 2020, 14:26 IST
ಬಾಗಲಕೋಟೆ ಗದ್ದನಕೇರಿ ಕ್ರಾಸ್‌ನ ಲಡ್ಡುಮುತ್ಯಾನ ಗುಡಿ ಸಭಾಂಗಣದ ಹೊರಗೆ ಬುಧವಾರ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು
ಬಾಗಲಕೋಟೆ ಗದ್ದನಕೇರಿ ಕ್ರಾಸ್‌ನ ಲಡ್ಡುಮುತ್ಯಾನ ಗುಡಿ ಸಭಾಂಗಣದ ಹೊರಗೆ ಬುಧವಾರ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು   

ಬಾಗಲಕೋಟೆ: ‘ಗ್ರಾಮ ಪಂಚಾಯ್ತಿಗಳಿಗೆ ಈಗಿರುವ ಸದಸ್ಯರನ್ನೇ ಸರ್ಕಾರ ಆರು ತಿಂಗಳು ಮುಂದುವರೆಸಲಿ. ಇಲ್ಲವೇ ಚುನಾವಣೆ ನಡೆಸಲಿ. ಯಾವುದೇ ಕಾರಣಕ್ಕೂ ಹೊಸಬರ ನಾಮನಿರ್ದೇಶನ ಒಪ್ಪುವುದಿಲ್ಲ’ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೋವಿಡ್–19 ಸೋಂಕಿನ ನೆಪದಲ್ಲಿ ಸರ್ಕಾರ ಬಿಜೆಪಿ ಕಾರ್ಯಕರ್ತರನ್ನು ಪಂಚಾಯ್ತಿಗಳಿಗೆ ನಾಮನಿರ್ದೇಶನ ಮಾಡಿ ಅವರಿಗೆ ಅಧಿಕಾರ ಕೊಡಲು ಹೊರಟಿದೆ ಎಂದು ಟೀಕಿಸಿದರು.

ಎಂಟು ಲಕ್ಷ ಮಂದಿ ವೀಕ್ಷಣೆಗೆ ಅವಕಾಶ..
ಜೂನ್ 7ರಂದು ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ. ಅದನ್ನು ಆನ್‌ಲೈನ್ ಮೂಲಕ ವೀಕ್ಷಣೆಗೆ ಪ್ರತೀ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗುವುದು. ಒಂದು ಪಂಚಾಯ್ತಿ ವ್ಯಾಪ್ತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು 50ರಂತೆ 8 ಲಕ್ಷ ಮಂದಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ADVERTISEMENT

ಮೂಗಿಗೆ ತುಪ್ಪ ಸವರುವ ಕೆಲಸ..
ಕೊರೊನಾ ಪ್ಯಾಕೇಜ್ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ ಎಂದು ಟೀಕಿಸಿದ ಜಾರಕಿಹೊಳಿ, ಉತ್ತರ ಕರ್ನಾಟಕದಲ್ಲಿ ಪ್ರವಾಹದ ವೇಳೆ ಸಂತ್ರಸ್ಥರಿಗೆ ಘೋಷಿಸಿದ್ದ ಪರಿಹಾರವನ್ನೇ ಸರ್ಕಾರ ಇನ್ನೂ ಕೊಟ್ಟಿಲ್ಲ. ಕೊರೊನಾ ಪ್ಯಾಕೇಜ್‌ ಅಡಿ ಜನರಿಗೆ ಪರಿಹಾರ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

’ಬ್ಯಾಂಕಿನಿಂದ ಕೊಡುವ ಸಾಲವನ್ನುಪ್ರಧಾನಿ ನರೇಂದ್ರ ಮೋದಿ ತಮ್ಮ ₹20 ಲಕ್ಷ ಕೋಟಿ ಮೊತ್ತದ ಕೊರೊನಾ ಪ್ಯಾಕೇಜ್‌ನಲ್ಲಿ ಸೇರಿಸಿದ್ದಾರೆ. ಗ್ಯಾರಂಟಿ ಇಲ್ಲದೇ ಬ್ಯಾಂಕ್ ಸಾಲ ಕೊಡುವುದಿಲ್ಲ. ಕೊಟ್ಟರೂ ಬಡ್ಡಿ ಹಾಕಿ ವಸೂಲಿ ಮಾಡುತ್ತಾರೆ. ಅದನ್ನು ಸರ್ಕಾರದ ನೆರವು ಎಂದು ಪರಿಗಣಿಸಬೇಕೆ? ಇದೆಲ್ಲಾ ಜನರನ್ನು ದಾರಿ ತಪ್ಪಿಸುವ ಕೆಲಸ‘ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಮಾಜಿ ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ,ಕೆಪಿಸಿಸಿ ಮುಖಂಡ ಬಸವಪ್ರಭು ಸರನಾಡಗೌಡ, ವಕ್ತಾರ ಅನಿಲ್‌ಕುಮಾರ ದಡ್ಡಿ, ಬಾದಾಮಿಯ ಮುಖಂಡ ಮಹೇಶ ಹೊಸಗೌಡ್ರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.