ADVERTISEMENT

ನಿರ್ದೇಶಕರಿಗೆ ತಲುಪದ ಚುನಾವಣೆ ವೇಳಾಪಟ್ಟಿ:ಪಿಕೆಪಿಎಸ್ ಚುನಾವಣೆ ಮತ್ತೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:35 IST
Last Updated 31 ಅಕ್ಟೋಬರ್ 2025, 5:35 IST
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯ ಎರಡನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯ ಅಂಗವಾಗಿ ಸಂಘದ ಹೊರಗೆ ಅಪಾರ ಜನರು ಸೇರಿದ್ದರು
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯ ಎರಡನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯ ಅಂಗವಾಗಿ ಸಂಘದ ಹೊರಗೆ ಅಪಾರ ಜನರು ಸೇರಿದ್ದರು   

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯ ಎರಡನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ಚುನಾವಣೆಯನ್ನು ಮತ್ತೆ ಮುಂದೂಡಲಾಗಿದೆ.

ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ 13 ಜನ ನಿರ್ದೇಶಕರಲ್ಲಿ ಐವರು ನಿರ್ದೇಶಕರಿಗೆ ನೋಂದಾಯಿತ ಅಂಚೆ ಮೂಲಕ ಕಳುಹಿಸಿದ ಚುನಾವಣೆಯ ವೇಳಾಪಟ್ಟಿ ಮುಟ್ಟಿದ ಬಗ್ಗೆ ಅಂಚೆ ಕಚೇರಿಯಿಂದ ಸ್ವೀಕೃತಿ ಪತ್ರ ಲಭ್ಯವಾಗಿಲ್ಲದ್ದರಿಂದ ಮಧ್ಯಾಹ್ನ 12ಕ್ಕೆ ನಡೆಯಬೇಕಿದ್ದ ಆಡಳಿತ ಮಂಡಳಿ ಸಭೆ ರದ್ದಾಗಿ ಚುನಾವಣೆಯನ್ನು ಮುಂದೂಡಲಾಯಿತು.

ಅ.13 ರಂದು ಸಹಕಾರ ಸಂಘಕ್ಕೆ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆಯಾದ ನಂತರ ಅ. 23 ರಂದು ಪದಾಧಿಕಾರಿಗಳ ಚುನಾವಣೆಯನ್ನು ನಿಗದಿಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ ಪಾಟೀಲ, ಭೀಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಶಿರೋಳ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 2 ಗಂಟೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಯಾವೊಬ್ಬ ಸದಸ್ಯರು ಭಾಗವಹಿಸದೇ ಇರುವುದರಿಂದ ಕೋರಂ ಕೊರತೆಯಿಂದ ಚುನಾವಣೆಯನ್ನು ಮುಂದೂಡಲಾಗಿತ್ತು.

ADVERTISEMENT

ಅ.30 ರಂದು ಪದಾಧಿಕಾರಿಗಳ ಚುನಾವಣೆ ನಡೆಸಲು ನಿರ್ಧರಿಸಿ ಎಲ್ಲ ನಿರ್ದೇಶಕರಿಗೆ ನೋಂದಾಯಿತ ಅಂಚೆಯ ಮೂಲಕ ಚುನಾವಣೆ ವೇಳಾಪಟ್ಟಿಯನ್ನು ಕಳುಹಿಸಲಾಗಿತ್ತು. ನಿರ್ದೇಶಕರಾದ ಪ್ರವೀಣ ಪಾಟೀಲ ಹಾಗೂ ಮಂಜು ಮುಗಳಖೋಡ ಅವರು ‘ಪದಾಧಿಕಾರಿಗಳ ಚುನಾವಣೆಯ ವೇಳಾಪತ್ರಿಕೆ ತಮಗೆ ತಲುಪಿಲ್ಲ. ಹೀಗಾಗಿ ಚುನಾವಣೆಯನ್ನು ಮುಂದೂಡಬೇಕು’ ಎಂದು ಚುನಾವಣಾಧಿಕಾರಿಗೆ ಅ. 29 ರಂದು ಅರ್ಜಿ ಸಲ್ಲಿಸಿದ್ದರು.

‘ಇಬ್ಬರು ನಿರ್ದೇಶಕರು ಸಲ್ಲಿಸಿದ ಅರ್ಜಿಯ ಅನ್ವಯ ಅಂಚೆ ಕಚೇರಿಯಿಂದ ಜಾರಿ ಮಾಡಿ ಪಡೆದ ಸ್ವೀಕೃತಿ ಪತ್ರಗಳನ್ನು ಸಂಘದ ಕಾರ್ಯಾಲಯದಲ್ಲಿ ನಿರ್ದೇಶಕರ ಸಮ್ಮುಖದಲ್ಲಿ ಗುರುವಾರ ಪರಿಶೀಲಿಸಿದಾಗ ಐವರು ನಿರ್ದೇಶಕರಿಗೆ ನೋಟಿಸ್ ಮುಟ್ಟಿದ ಬಗ್ಗೆ ಅಂಚೆ ಕಚೇರಿಯಿಂದ ಸ್ವೀಕೃತಿ ಲಭ್ಯವಾಗಿಲ್ಲ. ಹೀಗಾಗಿ ಸಭೆ ನಡೆಸಲು ಸಾಧ್ಯವಾಗಿಲ್ಲ’ ಎಂದು ಚುನಾವಣಾಧಿಕಾರಿ ಪಿ.ಎ. ಜಮಾದಾರ ತಿಳಿಸಿದರು.

‘ಚುನಾವಣೆಯ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಮುಂದೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಮಾರ್ಗದರ್ಶನ ಪಡೆಯುವುದಾಗಿ ನಿರ್ದೇಶಕರಿಗೆ ತಿಳಿಸಲಾಗಿದೆ. ಎರಡು ಬಾರಿ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ, ಮುಂದೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಮೇಲಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆಯಲಾಗುವುದು’ ಎಂದು ಜಮಾದಾರ ತಿಳಿಸಿದರು.

ಗುಂಪು ಘರ್ಷಣೆ: ಸಹಕಾರ ಸಂಘದ ಪದಾಧಿಕಾರಿಗಳ ಚುನಾವಣೆಯ ಕಾರಣ ಎರಡು ಗುಂಪುಗಳ ಮಧ್ಯೆ ಗುರುವಾರ ಘರ್ಷಣೆ ನಡೆದಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.