ADVERTISEMENT

ಪುತ್ರ–ಪುತ್ರಿಯ ಫಲಿತಾಂಶ ನೆಗೆಟಿವ್

ವೃದ್ಧನಿಗೆ ಹೊರಗಿನವರಿಂದ ಸೋಂಕು ತಗುಲಿರುವ ಆತಂಕ: ಮನೆ ಮನೆ ಸಮೀಕ್ಷೆ ಆರಂಭಿಸಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 16:24 IST
Last Updated 3 ಏಪ್ರಿಲ್ 2020, 16:24 IST

ಬಾಗಲಕೋಟೆ: ನಗರದ ಕೋವಿಡ್–19 ವೈರಸ್ ಸೋಂಕಿತ ವ್ಯಕ್ತಿಯ ಪುತ್ರ, ಪುತ್ರಿ ಹಾಗೂ ಸಹೋದರನ ಪತ್ನಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯ ಫಲಿತಾಂಶ ನೆಗೆಟಿವ್ ಬಂದಿದೆ. ಇದು ಜಿಲ್ಲಾಡಳಿತದ ನಿದ್ರೆ ಕೆಡಿಸಿದೆ.

ಈ ಮೊದಲು ಜಿಲ್ಲೆಯಲ್ಲಿ ಯಾವುದೇ ಕೋವಿಡ್–19 ಪ್ರಕರಣ ದೃಢಪಟ್ಟಿರಲಿಲ್ಲ. ಆದರೆ ಮಾರ್ಚ್ 31ರಂದು ನ್ಯುಮೊನಿಯಾದಿಂದ ಬಳಲುತ್ತಿದ್ದ ಹಳೆ ಬಾಗಲಕೋಟೆಯ 75 ವರ್ಷದ ವೃದ್ಧ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಅವರಗಂಟಲು ದ್ರವ ಹಾಗೂ ರಕ್ತದ ಮಾದರಿಯ ಫಲಿತಾಂಶ ಪಾಸಿಟಿವ್ ಬಂದಿತ್ತು.

ಸೋಂಕಿತ ವ್ಯಕ್ತಿ ಇತ್ತೀಚೆಗೆ ಹೊರಗೆ ಎಲ್ಲಿಗೂ ಪ್ರಯಾಣಿಸಿರಲಿಲ್ಲ. ಅವರ ಪುತ್ರ ಹಾಗೂ ಪುತ್ರಿ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ನಂತರ ಅವರು ಬಾಗಲಕೋಟೆಗೆ ಮರಳಿದ್ದರು. ಅವರಿಂದ ಕೋವಿಡ್–19 ಸೊಂಕು ತಗುಲಿರಬಹುದು ಎಂದು ಶಂಕಿಸಿದ್ದ ಜಿಲ್ಲಾಡಳಿತ ವೃದ್ಧನ ಪತ್ನಿ, ಇಬ್ಬರು ಮಕ್ಕಳು, ಸಹೋದರ ಹಾಗೂ ಅವರ ಪತ್ನಿಯಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಿದ್ದರು.

ADVERTISEMENT

’ಪರೀಕ್ಷೆಗೆ ಕಳುಹಿಸಿದ್ದ ಮೂವರ ಮಾದರಿಗಳ ಫಲಿತಾಂಶ ಶುಕ್ರವಾರ ರಾತ್ರಿಬಂದಿದೆ. ಎಲ್ಲರಿಗೂ ಕೋವಿಡ್–19 ನೆಗೆಟಿವ್ ಇದೆ. ಇನ್ನಿಬ್ಬರದ್ದು ಬರಬೇಕಿದೆ. ಅದು ನೆಗೆಟಿವ್ ಬಂದಲ್ಲಿ ಹೊರಗಿನವರಿಂದ ಸೊಂಕು ತಗುಲಿರುದು ಖಚಿತವಾಗಲಿದೆ‘ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಹೇಳುತ್ತಾರೆ.

ಹೀಗಾಗಿ ಸೋಂಕಿತ ವ್ಯಕ್ತಿ ಬಾಗಲಕೋಟೆಯಲ್ಲಿ ಖಾದ್ಯ ತೈಲದ ಅಂಗಡಿ ಹಾಗೂ ನವನಗರದಲ್ಲಿನ ದಿನಸಿ ಅಂಗಡಿ ಹೊಂದಿದ್ದಾರೆ. ಅಲ್ಲಿ ಸೋಂಕು ತಗುಲಿರಬಹುದು. ಹಾಗಿದ್ದಲ್ಲಿ ಬಾಗಲಕೋಟೆಯಲ್ಲಿ ಬೇರೆ ಸೋಂಕಿತರು ಇರಬಹುದು ಎಂಬುದು ಜಿಲ್ಲಾಡಳಿತದ ಅಂದಾಜು. ಹೀಗಾಗಿ ಸೋಂಕಿತ ವಾಸಿಸುತ್ತಿದ್ದ ಪ್ರದೇಶದಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.