ADVERTISEMENT

ಜಿಲ್ಲೆಯಲ್ಲಿ ಕೋವಿಡ್‌ಗೆ ನಾಲ್ವರು ಸಾವು

ಲೋಕಾಪುರದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದವರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 16:59 IST
Last Updated 14 ಜುಲೈ 2020, 16:59 IST

ಬಾಗಲಕೋಟೆ: ಕೋವಿಡ್‌ ಸೋಂಕಿಗೆ ತುತ್ತಾಗಿ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಸಾವಿಗೀಡಾಗಿದ್ದಾರೆ. ಇವರಲ್ಲಿ ಮೂವರು ಮಂಗಳವಾರ ನಿಧನರಾದರೆ ಮತ್ತೊಬ್ಬರು ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದರು. ಅವರಿಗೆ ಕೋವಿಡ್ ಇತ್ತು ಎಂಬುದು ಈಗ ದೃಢಪಟ್ಟಿದೆ.

ಗುಳೇದಗುಡ್ಡದ 60 ವರ್ಷದ ವೃದ್ಧೆ, ಬಾಗಲಕೋಟೆ ನವನಗರದ ಸೆಕ್ಟರ್ ನಂ 56ನೇ ಸೆಕ್ಟರ್ ನಿವಾಸಿ 74 ವರ್ಷದ ವೃದ್ಧ ಹಾಗೂ ಬಾಗಲಕೋಟೆಯ 50 ವರ್ಷದ ಮಹಿಳೆ ಕಳೆದ 24 ಗಂಟೆಯಲ್ಲಿ ಮೃತಪಟ್ಟಿದ್ದಾರೆ. ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಲೋಕಾಪುರದಲ್ಲಿ ಮೂರು ದಿನಗಳ ಹಿಂದೆ ಸಾವಿಗೀಡಾದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಇರುವುದು ಈಗ ದೃಢಪಟ್ಟಿದೆ.

ADVERTISEMENT

ಅಂತ್ಯಕ್ರಿಯೆಯಲ್ಲಿ ಭಾಗಿ; ಆತಂಕ..

ಲೋಕಾಪುರದ ವ್ಯಕ್ತಿ ಕೋವಿಡ್ ಲಕ್ಷಣಗಳಿಂದ ಸಾವನ್ನಪ್ಪಿದ್ದರೂ ಅವರ ಶವವನ್ನು ವಾರಸುದಾರರಿಗೆ ಕೊಡಲಾಗಿತ್ತು. ಅವರ ಅಂತ್ಯಕ್ರಿಯೆಯಲ್ಲಿ ಕುಟುಂಬದವರು ಹಾಗೂ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಅವರೆಲ್ಲರಿಗೂ ಈಗ ಆತಂಕ ಎದುರಾಗಿದೆ.

ಲೋಕಾಪುರದ ಮೃತ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ಸ್ಥಳೀಯವಾಗಿ ಪರೀಕ್ಷೆ ಮಾಡಿದಾಗ ಫಲಿತಾಂಶ ನೆಗೆಟಿವ್ ಬಂದಿತ್ತು. ಹೀಗಾಗಿ ಅವರ ಶವವನ್ನು ಮನೆಯವರಿಗೆ ಹಸ್ತಾಂತರಿಸಿದ್ದೆವು. ಮತ್ತೊಮ್ಮೆ ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅಲ್ಲಿ ಪಾಸಿಟಿವ್ ಬಂದಿದೆ. ಶವ ಸಂಸ್ಕಾರದಲ್ಲಿ ಭಾಗಿಯಾದವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.