ADVERTISEMENT

ಬಾಗಲಕೋಟೆ| ಹಸುಗೂಸು ರಕ್ಷಿಸಿದ ಅಮ್ಮನ ಕಾಳಜಿ: ವೈದ್ಯರ ನಿಟ್ಟುಸಿರು

ಕೋವಿಡ್-19 ಸೋಂಕು: ಅಮ್ಮನಿಗೆ ಪಾಸಿಟಿವ್, ಮಗುವಿಗೆ ನೆಗೆಟಿವ್!

​ಪ್ರಜಾವಾಣಿ ವಾರ್ತೆ
Published 12 ಮೇ 2020, 8:43 IST
Last Updated 12 ಮೇ 2020, 8:43 IST
ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಿಂದ ಮಂಗಳವಾರ ಮುಧೋಳದ ಆರು ಮಂದಿ ಮನೆಗೆ ಮರಳಿದರು.
ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಿಂದ ಮಂಗಳವಾರ ಮುಧೋಳದ ಆರು ಮಂದಿ ಮನೆಗೆ ಮರಳಿದರು.   

ಬಾಗಲಕೋಟೆ: ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಯಾದ ಆರು ಮಂದಿಯ ಪೈಕಿ ಮೂರು ತಿಂಗಳ ಹಸುಗೂಸಿನೊಂದಿಗೆ ಹೆಜ್ಜೆಹಾಕಿದ ತಾಯಿ ಎಲ್ಲರ ಗಮನ ಸೆಳೆದರು.

ಅವರು ಆಸ್ಪತ್ರೆಯಿಂದ ಹೊರಬಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಅವರಿಂದ ಹೂಗುಚ್ಛ ಪಡೆದಾಗ ಚಪ್ಪಾಳೆ ಸದ್ದು ಜೋರಾಗಿಯೇ ಮೊಳಗಿತು.

ಮುಧೋಳದ 21 ವರ್ಷದ ಮಹಿಳೆಗೆ ರೋಗಿ ಸಂಖ್ಯೆ 381 ಅವರ ಸಂಪರ್ಕದಿಂದ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಆದರೆ ಆಕೆಯ ಮೂರು ತಿಂಗಳ ಗಂಡು ಮಗುವಿಗೆ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಆದರೆ ಮಗು ಅಮ್ಮನನ್ನು ಅಗಲುವಂತಿರಲಿಲ್ಲ. ಇದು ಚಿಕಿತ್ಸೆ ನೀಡುವ ವೈದ್ಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ADVERTISEMENT

ತಾಯಿಯ ಎದೆಹಾಲಿನಿಂದ ಮಗುವಿಗೆ ಕೋವಿಡ್-19 ಸೋಂಕು ಹರಡುವುದಿಲ್ಲ ಎಂಬುದು ಅಧ್ಯಯನದಿಂದ ದೃಢಪಟ್ಟಿದ್ದ ಕಾರಣ ವೈದ್ಯರಿಗೆ ಒಂದಷ್ಟು ಸಮಾಧಾನ ತಂದಿತ್ತು. ಆದರೆ ದಿನದ 24 ಗಂಟೆಯೂ ಅಮ್ಮನಿಗೆ ಅಂಟಿಕೊಂಡು ಆಕೆಯ ಮಡಿಲಲ್ಲೇ ಇರಬೇಕಾದ ಕಂದಮ್ಮನನ್ನು ಸೋಂಕು ಬಾರದಂತೆ ರಕ್ಷಿಸುವುದು ಸವಾಲಾಗಿತ್ತು.

ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಬಾಣಂತಿಯ ಚಿಕಿತ್ಸೆಗೆ ವೈದ್ಯರು ಅನುಸರಿಸಿದರು.

'ತಾಯಿಗೆ ನಿತ್ಯ ಕೌನ್ಸೆಲಿಂಗ್ ಮಾಡುತ್ತಿದ್ದೆವು. ಆಕೆಗೆ ವಿಶೇಷ ಗೌನ್ (ನಿಲುವಂಗಿ), ಎನ್-95 ಮಾಸ್ಕ್ ಕೊಟ್ಟಿದ್ದೆವು. ತನ್ನ ಉಸಿರು, ಎಂಜಲು ಮಗುವಿಗೆ ತಾಕದಂತೆ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಮನದಟ್ಟು ಮಾಡಿದ್ದೆವು. ಅಮ್ಮ-ಮಗುವಿಗೆ ಪ್ರತ್ಯೇಕ 12 ಬೆಡ್ ಗಳ ವಾರ್ಡ್ ಬಿಟ್ಟುಕೊಟ್ಟಿದ್ದೆವು' ಎಂದು ಮಹಿಳೆಗೆ ಚಿಕಿತ್ಸೆ ನೀಡಿದ ತಜ್ಞ ವೈದ್ಯ ಡಾ.ಚಂದ್ರಕಾಂತ ಜವಳಿ 'ಪ್ರಜಾವಾಣಿ'ಗೆ ತಿಳಿಸಿದರು.

'ನಾವು ನೀಡಿದ ಸಲಹೆಯನ್ನು ತಾಯಿ ಚಾಚೂ ತಪ್ಪದೇ ಪಾಲಿಸಿದರು. ಹೀಗಾಗಿ ಮಗುವಿಗೆ ಸೋಂಕು ತಗುಲಲಿಲ್ಲ. ಆಸ್ಪತ್ರೆಯಿಂದ ಬಿಡುಗಡೆಗೆ ಮುನ್ನ ತಾಯಿ-ಮಗು ಇಬ್ಬರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಡಾ.ಜವಳಿ ತಿಳಿಸಿದರು.

ಮಗುವನ್ನು ಎದೆಗಪ್ಪಿಕೊಂಡು ವೈದ್ಯಾಧಿಕಾರಿಯಿಂದ ಹೂಗುಚ್ಛ ಪಡೆದ ಮಹಿಳೆ ಅಲ್ಲಿಯೇ ಸಿದ್ಧವಾಗಿ ನಿಂತಿದ್ದ ಆಂಬುಲೆನ್ಸ್ ಏರುತ್ತಿದ್ದಂತೆಯೇ ಎರಡು ದಿನ ತಡವಾಗಿ ವಿಶ್ವ ಅಮ್ಮಂದಿರ ದಿನ ಆಚರಿಸಿದ ಭಾವ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮೊಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.