ಹುನಗುಂದ: ತಾಲ್ಲೂಕಿನ ಅಮರಾವತಿ- ಬಿಂಜವಾಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ನೀರಿನ ದೊಡ್ಡದಾದ ತೆಗ್ಗಿನಲ್ಲಿ ರವಿವಾರ ಮೊಸಳೆ ಕಾಣಿಸಿಕೊಂಡಿದೆ.
ನೀರಿನ ಗುಂಡಿಯಲ್ಲಿ ಮೊಸಳೆ ಮಲಗಿರುವುದು ಹಾಗೂ ನೀರಿನೊಳಗೆ ಮೊಸಳೆ ಮುಳುಗಿರುವ ಸೆರೆಹಿಡಿದ ಮೊಬೈಲ್ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಕೆಲವು ದಿನಗಳ ಹಿಂದೆಯೂ ಇದೇ ಸ್ಥಳದಲ್ಲಿ ಮೊಸಳೆ ಕಾಣಿಸಿಕೊಂಡು, ನೀರು ಕುಡಿಯಲು ಹೋಗಿದ್ದ ಎರಡು ಕುರಿಗಳನ್ನು ತಿಂದುಹಾಕಿದೆ ಎಂದು ಹೇಳಲಾಗುತ್ತಿದೆ.
ಪ್ರತಿನಿತ್ಯ ಹುನಗುಂದ ಕರಡಿ ಮಾರ್ಗದಲ್ಲಿ ಬಿಂಜವಾಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರು ಈಗ ಹೆದರುತ್ತಿದ್ದಾರೆ. ಇಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಬರುತ್ತಿದ್ದ ರೈತರಲ್ಲಿ ಆತಂಕ ಉಂಟು ಮಾಡಿದೆ. ಈಜಾಡಲು ಇಲ್ಲಿಗೆ ಬರುತ್ತಿದ್ದ ಯುವಕರು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನು ಹಿಡಿದು ದೂರ ಪ್ರದೇಶಕ್ಕೆ ಸಾಗಿಸಬೇಕು ಎಂದು ಅಮರಾವತಿ ಬಿಂಜವಾಡಗಿ ಗ್ರಾಮಸ್ಥರು ಒತ್ತಾಯಿಸಿದರು.
ನೀರಿನ ಗುಂಡಿಯ ಹತ್ತಿರ ಮೊಸಳೆ ಇದೆ ಎನ್ನುವ ಎಚ್ಚರಿಕೆಯ ನಾಮ ಫಲಕವನ್ನು ಅರಣ್ಯ ಸಿಬ್ಬಂದಿ ಅಳವಡಿಸಿದ್ದಾರೆ.
‘ಸ್ಥಳಕ್ಕೆ ಸಿಬ್ಬಂದಿ ಕಳುಹಿಸಿಕೊಟ್ಟು ಪರಿಶೀಲಿಸಲಾಗಿದೆ. ಸದ್ಯಕ್ಕೆ ಮೊಸಳೆ ಕಂಡಿಲ್ಲ. ಮತ್ತೆ ಕಂಡುಬಂದರೆ ತಜ್ಞರನ್ನು ಕರೆಯಿಸಿ, ಮೊಸಳೆ ಸೆರೆ ಹಿಡಿಯಲು ಕ್ರಮಕೈಗೊಳ್ಳಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಪಂಚಾಕ್ಷರಯ್ಯ ಪುರಾಣಿಕಮಠ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.