
ಬೆಂಗಳೂರಿನ ಆಕ್ಸಿಜನ್ ತಂಡದ ಕಲಾವಿದರು ನೃತ್ಯ ಪ್ರದರ್ಶನ ಮಾಡಿದರು
ಬಾದಾಮಿ: ಚಾಲುಕ್ಯ ಉತ್ಸವದಲ್ಲಿ ಜಾನಪದ, ಭರತನಾಟ್ಯ, ಸೋಬಾನ ಪದ, ಶಿವಭಜನೆ ಮುಂತಾದ ಗಾಯನ, ನೃತ್ಯಗಳು ಪಟ್ಟದಕಲ್ಲಿನ ವಿಕ್ರಮಾದಿತ್ಯ ವೇದಿಕೆಯಲ್ಲಿ ಮಂಗಳವಾರ ಸಾಂಸ್ಕೃತಿಕ ಲೋಕವನ್ನೇ ಅನಾವರಣಗೊಳಿಸಿದ್ದವು.
ಮಧ್ಯಾಹ್ನ 4ಕ್ಕೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯರಾತ್ರಿ ವರೆಗೂ ಮುಂದುವರೆದಿದ್ದವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಕಲಾ ತಂಡಗಳ ಪ್ರದರ್ಶನ ವೀಕ್ಷಿಸಿದರು.
ಮುಧೋಳದ ಮಂಜುಳಾ ಸಂಬಾಳಮಠ ಅವರ ಶಾಸ್ತ್ರೀಯ ಸಂಗಿ, ಬಾದಾಮಿಯ್ಯ ಚಂದ್ರವ್ವ ಬಳಿಗಾರ ಅವರ ಸೋಬಾನ ಪದ, ಗುಳೇದಗುಡ್ಡದ ಮೈತ್ರಿ ಮಾದಗುಂಡಿ ಭರತನಾಟ್ಯ ಪ್ರೇಕ್ಷಕರನ್ನು ಸೆರೆ ಹಿಡಿದವು.
ಗದುಗಿನ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಯೋಗಾಸನಗಳಿಗೆ ಜನರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಧರಾಗಿದ್ದರೂ, ವಿವಿಧ ಆಸನಗಳನ್ನು ಎಲ್ಲರೂ ಏಕಕಾಲಕ್ಕೆ ಪ್ರದರ್ಶಿಸಿ ಜನರ ಅಚ್ಚರಿಗೆ ಕಾರಣರಾದರು.
ಮಾಯದ ಸಂಸಾರ, ತಮ್ಮಾ ಇದು ದುಃಖದ ಸಾಗರ: ಬಾಗಲಕೋಟೆಯ ಸಿದ್ರಾಮಯ್ಯ ಮಠಪತಿ ಅವರ ಶಾಸ್ತ್ರೀಯ ಸಂಗೀತ, ಬನಶಂಕರಿದೇವಿ ಜಾನಪದ ಸಂಪ್ರದಾಯ ಕಲಾ ಸಂಘದ ಬಾದಾಮಿಯ ಚಾಲುಕ್ಯರ ಕುರಿತ ಹಾಡು ಇತಿಹಾಸವನ್ನು ಬಿಚ್ಚಿಟ್ಟಿತು.
ಬಾದಾಮಿಯಲ್ಲಿ ನಡೆದ ಚಾಲುಕ್ಯ ಉತ್ಸವದಲ್ಲಿ ಗದುಗಿನ ಜ್ಞಾನಸಿಂಧು ಅಂಧಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಯೋಗ
ಸೋಮವಾರ ರಾತ್ರಿ ಗಾಯಕ ಹನುಮಂತು ಹಾಗೂ ಅವರ ತಂಡದ ಸದಸ್ಯರು ಜಾನಪದ, ಚಲನಚಿತ್ರಗಳ ಗೀತೆಗಳನ್ನು ಹಾಡಿದರು. ನಂತರದ ಸಂಜೀತ ಹೆಗ್ಡೆ ವಿವಿಧ ಹಾಡುಗಳನ್ನು ಹಾಡುವ ಮೂಲಕ ಹೊಸ ಲೋಕವನ್ನೇ ಸೃಷ್ಟಿಸಿದ್ದರು.
ವೇದಿಕೆ ತೆರವು
ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ಸೋಮವಾರ ಸಾವಿರಾರು ಸಂಗೀತ ಮತ್ತು ನೃತ್ಯ ಕಲಾವಿದರು ವಿದ್ಯುತ್ ದೀಪಗಳ ಬೆಳಕಿನಲ್ಲಿ ಸಂಭ್ರಮಿಸಿದ ವೇದಿಕೆ ಮಂಗಳವಾರ ಭರದಿಂದ ತೆರವು ಕಾರ್ಯಾಚರಣೆ ನಡೆದಿತ್ತು.
ಚಾಲುಕ್ಯ ಉತ್ಸವ-2026 ಅಂಗವಾಗಿ ಎಪಿಎಂಸಿ ಇಮ್ಮಡಿ ಪುಲಿಕೇಶಿ ವೇದಿಕೆಯನ್ನು ಚಾಲುಕ್ಯ ಸಾಮ್ರಾಜ್ಯದ ಸ್ಮಾರಕಗಳ ವೇದಿಕೆ ರಚಿಸಬೇಕಿತ್ತು. ಆದರೆ, ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ವೇದಿಕೆಯಾಗಿತ್ತು. ಜಿಲ್ಲಾ ಆಡಳಿತವು ಸ್ಥಳೀಯ ಕಲಾವಿದರ ಸಲಹೆ ಪಡೆಯಬೇಕಿತ್ತು ಎಂದು ಸ್ಥಳೀಯ ಕಲಾವಿದರು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಿಗೆ, ಸಂಘ ಸಂಸ್ಥೆಗಳಿಗೆ, ವರ್ತಕರಿಗೆ ಮತ್ತು ಪರ್ತಕರ್ತರಿಗೂ ಆಮಂತ್ರಣ ಪತ್ರಿಕೆಯನ್ನು ತಲುಪಿಸಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದರು. ಉತ್ಸವದ ಆಮಂತ್ರಣ ಪತ್ರಿಕೆ ಪ್ರಕಟವಾಗಿದ್ದರೂ ಸರಿಯಾಗಿ ವಿತರಣೆ ಆಗಿಲ್ಲ ಎಂದು ತಿಳಿದಿದೆ.
ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ಮಾಡಿದರು. ಇದರಲ್ಲಿ ‘ ದಕ್ಷಿಣ ಪಥೇಶ್ವರ ‘ಬದಲಾಗಿ‘ ದಕ್ಷೀಣ ಪಥೇಶ್ವರ ಎಂದು ತಪ್ಪಾಗಿ ಬರೆದಿದ್ದಾರೆ ಎಂದು ಕನ್ನಡ ಮತ್ತು ಇತಿಹಾಸ ಶಿಕ್ಷಕರು ಆರೋಪಿಸಿದರು.
ಮಧ್ಯಾಹ್ನ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ
ಮಧ್ಯರಾತ್ರಿ ತನಕ ನಡೆದ ಹಾಡು, ಸಂಗೀತ
ಮನಸೂರೆಗೊಂಡ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಯೋಗಾಸನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.